ಮದ್ಯ ಮುಕ್ತನಾಗಿ ಯಶಸ್ಸನ್ನು ಕಂಡ ಕಾಫಿನಾಡಿನ ರವಿ ಶೆಟ್ಟಿ

Janajagurthi Vedike

ಮೂಡಿಗೆರೆ ತಾಲೂಕಿನ ಯಡೂರು ಗ್ರಾಮದ ರವಿ ಶೆಟ್ಟಿಯವರು ಕಿರಣಿ ಅಂಗಡಿಯಲ್ಲಿ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ 18 ವಯಸ್ಸಿನಲ್ಲಿ ಸ್ನೇಹಿತರ ಸಹವಾಸದಿಂದ ಮದ್ಯಪಾನ ಚಟಕ್ಕೆ ಬಲಿಯಾಗಿದ್ದು 27 ವರ್ಷ ಮಧ್ಯಪಾನದ ದಾಸನಾಗಿದ್ದರು.  ಇವರು ಕೆಲಸ ಬಿಟ್ಟು ಬರುವುದು ರಾತ್ರಿ ಮಕ್ಕಳು ಮಲಗಿದ ನಂತರ ಬೆಳಗ್ಗೆ  ಮಕ್ಕಳು ಏಳುವುದಕ್ಕಿಂತ ಮುಂಚೆಯೇ ಕೆಲಸಕ್ಕೆ ಹೋಗುತ್ತಿದ್ದರು, ಆದ್ದರಿಂದ ಅವರ ಮಕ್ಕಳಿಗೆ ತಂದೆಯ ಪರಿಚಯವೇ ಇಲ್ಲದಂತಾಗಿತ್ತು. ದುಡಿದ ಹಣವನ್ನು ಕುಡಿತಕ್ಕೆ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದರು,  ಕುಡಿಯುವುದಕ್ಕಾಗಿ ಒಂದು ಎಕರೆ ಜಾಗವನ್ನು ಕೇವಲ 15 ಸಾವಿರಕ್ಕೆ ಮಾರಾಟ ಮಾಡಿರುತ್ತಾರೆ.
            ಇಂತಹ ಸಂದರ್ಭದಲ್ಲಿ ಕುಡಿತ ಬಿಡಬೇಕೆಂದು ಅವರಲ್ಲಿ ಆಸೆಗಳಿದ್ದರೂ ಬಿಡಲು ಸಾಧ್ಯವಾಗುತ್ತಿರಲಿಲ್ಲ. 2008ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸಂಘವನ್ನು ಸೇರಿಕೊಂಡು ಒಕ್ಕೂಟ ಸಭೆಗೆ ಹೋದಾಗ ಯೋಜನೆ ಕಾರ್ಯಕರ್ತರು ಮದ್ಯವರ್ಜನ ಶಿಬಿರ ಮಾಹಿತಿ ಕೊಟ್ಟ ಕಾರಣ ಮದ್ಯವರ್ಜನ ಶಿಬಿರಕ್ಕೆ ಸೇರ್ಪಡೆಗೊಂಡರು. ಕಳೆದ ಒಂಬತ್ತು ವರ್ಷದಿಂದ ಕುಡಿತ ಬಿಟ್ಟು ಮದ್ಯಮುಕ್ತ ಜೀವನವನ್ನು ಉತ್ತಮ ರೀತಿ  ಸಾಗಿಸುತ್ತಿದ್ದಾರೆ. ಮದ್ಯವರ್ಜನ ಶಿಬಿರ ಮುಗಿಸಿ ಬಂದ ನಂತರ ದಿನದಿಂದ ಇವತ್ತಿನವರೆಗೆ ಪ್ರತಿದಿನ ಮಕ್ಕಳೊಂದಿಗೆ ಭಜನಾ ಕಾರ್ಯಕ್ರಮ ಮನೆಯಲ್ಲಿ ನಡೆಸುತ್ತಿದ್ದು ವಾರಕ್ಕೊಂದು ಭಜನಾ ಮಂದಿರಕ್ಕೆ ಹೋಗಿ ಗ್ರಾಮದವರೊಂದಿಗೆ ಭಜನಾ ಕಾರ್ಯಕ್ರಮದಲ್ಲಿ  ತಾವು ಪಾಲ್ಗೊಳ್ಳುತ್ತಿದ್ದಾರೆ.         

            ಇವರಿಗೆ ಮೂರು ಜನ ಹೆಣ್ಣು ಮಕ್ಕಳಲ್ಲಿ ಒಬ್ಬರು ನರ್ಸಿಂಗ್, ಮತ್ತೊಬ್ಬರಿಗೆ ಬಿಕಾಂ, ಮತ್ತೊಬ್ಬಳಿಗೆ ಪಿಯುಸಿ ಉನ್ನತ ವಿದ್ಯಾಭ್ಯಾಸವನ್ನು ಕೊಡಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಬೀಳುಬಿಟ್ಟ ಜಾಗದಲ್ಲಿ  ಬೋರ್ವೆಲ್ ಹಾಕಿಕೊಂಡು ಎರಡು ಎಕರೆ ಜಾಗದಲ್ಲಿ 8 ಕ್ವಿಂಟಲ್ ಕಾಫಿ, ಕಾಳುಮೆಣಸು 2 ಕ್ವಿಂಟಲ್, ಅಡಿಕೆ 8 ಕ್ವಿಂಟಲ್, ಸಲ್ಪ ಏಲಕ್ಕಿ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಕೊಂಡು ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ. ಇದರ ಜೊತೆಯಲ್ಲಿ ಗ್ರಾಮಪಂಚಾಯತಿಯ ವಾಟರ್ ಮ್ಯಾನ್ ಕೆಲಸಕ್ಕೆ ಸೇರಿಕೊಂಡು ತಿಂಗಳಿಗೆ 3000  ಸಂಬಳವನ್ನು ಪಡೆಯುತ್ತಿದ್ದಾರೆ. ಸಮಯವಿದ್ದಾಗ ಕೂಲಿ ಕೆಲಸಕ್ಕೆ ಹೋಗಿ ದಿನಕ್ಕೆ 400 ರೂಪಾಯಿ ಕೂಲಿಯಂತೆ ದುಡಿಯುತ್ತಿದ್ದಾರೆ. ವಾರ್ಷಿಕವಾಗಿ ರೂ. 3 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ ಹಾಗೂ 35 ನಾಟಿ ಕೋಳಿ ಮರಿಗಳನ್ನು ತೆಗೆದುಕೊಂಡು ಮನೆಯಲ್ಲಿ ಸಾಕುತ್ತಿದ್ದಾರೆ.

          ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇಲ್ಲಿವರೆಗೆ ಕುಟುಂಬಕ್ಕೆ 800000  ಪ್ರಗತಿನಿಧಿಯನ್ನು ಪಡೆದು ಮರುಪಾವತಿ ಮಾಡಿರುತ್ತಾರೆ. ಯೋಜನೆಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕಾರ್ಯದರ್ಶಿಯಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಉತ್ತಮ ಮನೆಯನ್ನು ಸಹ ಕಟ್ಟಿರುತ್ತಾರೆ.  ಇಲ್ಲಿವರೆಗೆ ಮದ್ಯವ್ಯಸನಕ್ಕೆ ಒಳಗಾದವರನ್ನು 25ಕ್ಕಿಂತ ಹೆಚ್ಚು ಜನರನ್ನು ಮದ್ಯವರ್ಜನ ಶಿಬಿರಕ್ಕೆ ಸೇರಿಸಿ ಪಾನಮುಕ್ತರನ್ನಾಗಿಸಿದ್ದಾರೆ.