ಅರಿಶಿನಕುಂಟೆ ನೆಲಮಂಗಲದಲ್ಲಿ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಬೆಂಗಳೂರು ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಂಗಳೂರು ಗ್ರಾಮಾಂತರ ಜಿಲ್ಲೆ ಇದರ ಸಹಯೋಗದೊಂದಿಗೆ ರಾಜರ್ಷಿ ಪದ್ಮಭೂಷಣ ಡಾ|| ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ|| ಹೇಮಾವತಿ ವಿ. ಹೆಗ್ಗಡೆಯವರ ಕೃಪಾಷೀರ್ವಾದ ಹಾಗೂ ಮಾರ್ಗದರ್ಶನಗಳೊಂದಿಗೆ ರೂಡ್ ಸೆಟ್ ಸಂಸ್ಥೆ ಅರಿಶಿನಕುಂಟೆ ನೆಲಮಂಗಲದಲ್ಲಿ ಪಾನಮುಕ್ತ ನವಜೀವನ ಸಮಿತಿಯ ಸದಸ್ಯರ 10 ದಿನಗಳ ಉಚಿತ ಕುರಿ-ಮೇಕೆ ಸಾಕಾಣಿಕೆ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ಬೆಂಗಳೂರು ಪ್ರಾದೇಶಿಕ ವಿಭಾಗದ ಆಡಳಿತಾತ್ಮಕ ಯೋಜನಾಧಿಕಾರಿಗಳಾದ ಶ್ರಿ ಸುಕೇಶ್ ಸುವರ್ಣ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಅಥಿತಿಗಳು ದೀಪವನ್ನು ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಬೆಂಗಳೂರು ಪ್ರಾದೇಶಿಕ ವಿಭಾಗದ ಆಡಳಿತಾತ್ಮಕ ಯೋಜನಾಧಿಕಾರಿಗಳಾದ ಶ್ರೀ ಸುಕೇಶ್ ಸುವರ್ಣ ರವರು ಶ್ರೀ ಕ್ಷೇತ್ರ ಧರ್ಮಸ್ಥಳವು ಸ್ವಚ್ಚತೆಗೆ ಹೆಸರುವಾಸಿಯಾಗಿದ್ದು ನವಜೀವನ ಸಮಿತಿಯ ಸದಸ್ಯರು ಶ್ರೀ ಕ್ಷೇತ್ರದ ಪ್ರತಿನಿಧಿಗಳಾಗಿ ಸ್ವ- ಉದ್ಯೋಗ ತರಬೇತಿಯನ್ನು ಪಡೆಯಲು ಆಗಮಿಸಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಂಗ ಸಂಸ್ಥೆ ರೂಡ್ ಸೆಟ್ ನ ನಿಯಮಗಳಿಗೆ ಬದ್ಧರಾಗಿ ತರಬೇತಿಯನ್ನು ಪಡೆದು ಆದರ್ಶ ಬದುಕನ್ನು ನಡೆಸಬೇಕೆಂದು ಕಿವಿ ಮಾತನ್ನು ಹೇಳಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು. ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳಾದ ಶ್ರೀ ತಿಮ್ಮಯ್ಯ ನಾಯ್ಕ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಿಚಯದೊಂದಿಗೆ ಜನಜಾಗೃತಿ ವೇದಿಕೆಯಿಂದ ನಡೆಯುವ ಕಾರ್ಯಕ್ರಮಗಳು ಹಾಗೂ ನವಜೀವನ ಸಮಿತಿ ಸದಸ್ಯರು ತರಭೇತಿಯಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದಂತಹ ನಿಯಮಗಳ ಬಗ್ಗೆ ತಿಳಿಸಿದರು. ಸದಸ್ಯರು ತರಬೇತಿಯಲ್ಲಿ ನೀಡುವ ಮಾಹಿತಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬ್ಯಾಂಕ್ ಗಳಿಂದ ಸಾಲ ಸೌಲಭ್ಯಗಳನ್ನು ಪಡೆದು ಯಶಸ್ವಿ ಉದ್ದಿಮೆದಾರರಾಗಿ ಪೂಜ್ಯರ ಕಾರ್ಯಕ್ರಮಕ್ಕೆ ಯಶಸ್ಸನ್ನು ನೀಡುವಂತಹ ವ್ಯಕ್ತಿಗಳು ನೀವಾಗಬೇಕೆಂದು ತಿಳಿಸಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು. ರೂಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ರವಿಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ತರಬೇತಿಯಲ್ಲಿ ಭಾಗವಹಿಸಿರುವವರು ಗ್ರಾಮೀಣ ಪ್ರದೇಶದವರೆ ಆದ ಕಾರಣ ಕುರಿಯನ್ನು ನಡೆದಾಡುವ ಲಕ್ಷೀಯೆಂದೆ ಕರೆಯುವುದು ವಾಡಿಕೆ ಆದ್ದರಿಂದ ಈ ತರಬೇತಿಯಲ್ಲಿ ಕುರಿ ಸಾಕಾಣಿಕೆಗೆ ಬೇಕಾದ ಅಗತ್ಯ ಮಾಹಿತಿ ಮತ್ತು ಔಷದೋಪಚಾರಗಳ ಬಗ್ಗೆ ನುರಿತ ತಜ್ಞ ಪಶು ವೈದ್ಯಾಧಿಕಾರಿಗಳಿಂದ ಮಾಹಿತಿಯನ್ನು ನೀಡಲಾಗುವುದೆಂದು ತಿಳಿಸಿ ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಮೇಲ್ವಿಚಾರಕರಾದ ಶ್ರೀ ಎಂ. ಎಸ್. ದರ್ಶನ್, ರೂಡ್ ಸೆಟ್ ಸಂಸ್ಥೆಯ ಉಪನ್ಯಾಸಕರಾದ ಕು. ವಿದ್ಯಾ, ಶ್ರೀ ಸಂತೋಷ್ ಶೆಟ್ಟಿ ಹಾಗೂ ನವಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.