ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಶಿರಾ 2 ತಾಲೂಕು ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ತುಮಕೂರು 2 ಜಿಲ್ಲೆ ಸಹಯೋಗದೊಂದಿಗೆ ಶಿರಾ 2 ಯೋಜನಾ ಕಛೇರಿ ಸಭಾಂಗಣದಲ್ಲಿ ಶ್ರೀ ಮಂಜುನಾಥ ಸ್ವಾಮಿ ಪೂಜೆ, ಭಜನಾ ಕಾರ್ಯಕ್ರಮ ಹಾಗೂ ನವಜೀವನ ಸಮಿತಿ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಅಥಿತಿಗಳು, ನವಜೀವನ ಸಮಿತಿ ಸದಸ್ಯರು ಮತ್ತು ನವಜೀವನ ಸಮಿತಿ ಸದಸ್ಯರ ಕುಟುಂಬದ ಸದಸ್ಯರುಗಳು ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿರಾ 2 ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀ ರಮೇಶ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ನಡೆಸಲ್ಪಡುವ ಕಾರ್ಯಕ್ರಮಗಳಲ್ಲಿ ನವಜೀವನ ಸಮಿತಿಯ ಸದಸ್ಯರುಗಳು ಸಕ್ರಿಯವಾಗಿ ತೊಡಗಿಕೊಳ್ಳಬೇಕೆಂದರು. ಶಿರಾ 2 ಯೋಜನಾ ಕಛೇರಿ ವ್ಯಾಪ್ತಿಯಲ್ಲಿ 2 ವಾತ್ಸಲ್ಯ ಮನೆಗಳನ್ನು ಯೋಜನೆಯ ಅನುದಾನದಿಂದ ಸ್ವತಃ ನವಜೀವನ ಸಮಿತಿ ಸದಸ್ಯರೆ ನಿರ್ಮಾಣವನ್ನು ಮಡಿಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು. ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ಶ್ರೀ ಎಂ. ಎಸ್. ದರ್ಶನ್ ರವರು ಮಾತನಾಡಿ ನವಜೀವನ ಸಮಿತಿ ಸದಸ್ಯರು ಕಡ್ಡಾಯವಾಗಿ ನವಜೀವನ ಸಮಿತಿಗಳ ವಾರದ ಸಭೆಗೆ ಹಾಗೂ ಮಾಸಿಕ ಸಭೆಗಳಿಗೆ ಹಾಜರಾಗುವ ಮೂಲಕ ಪಾನಮುಕ್ತರಾಗಿ ಪೂಜ್ಯ ಖಾವಂದರ ಪ್ರೀತಿಯ ಕಾರ್ಯಕ್ರಮದ ಯಶಸ್ಸಿನ ಪಾಲುದಾರರಾಗಬೇಕೆಂದು ತಿಳಿಸಿದರು. ನವಜೀವನ ಸಮಿತಿಯ ಸದಸ್ಯರುಗಳಿಗೆ ಉಚಿತ ಸ್ವ ಉದ್ಯೋಗ ತರಬೇತಿಯನ್ನು ನೀಡುತ್ತಿರುವ ಬಗ್ಗೆ, ನವಜೀವನ ಸಮಿತಿಯ ಸದಸ್ಯರು ಕುಟುಂಬ ಸದಸ್ಯರ ಜೊತೆ ಅನ್ಯೋನ್ಯತೆಯಿಂದ ಇರುವ ಬಗ್ಗೆ, ಸದಸ್ಯರಿಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ದೊರಕುವ ಸೌಲಭ್ಯಗಳ ಬಗ್ಗೆ ಹಾಗೂ ಸ್ವಚ್ಚತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರಿ ಬಸವರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಜನಜಾಗೃತಿ ವೇದಿಕೆಯ ಸದಸ್ಯನಾಗಿ ಧರ್ಮಸ್ಥಳದ ಈ ಧರ್ಮಕಾರ್ಯದಲ್ಲಿ ಭಾಗಿಯಾಗಿರುವುದು ನನ್ನ ಪುಣ್ಯ ಎಂದು ತಿಳಿಸಿ ಸರ್ವಜ್ಞ ಮಹಾಕವಿಯ ತ್ರಿಪದಿಯ ಸಾಲುಗಳ ಮೂಲಕ ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ಶಿರಾ 2 ಯೋಜನಾ ಕಛೇರಿ ಹಣಕಾಸು ಪ್ರಬಂದಕರು, ಶಿರಾ ವಲಯದ ಸೇವಾಪ್ರತಿನಿಧಿಗಳು, ನವಜೀವನ ಸಮಿತಿ ಸದಸ್ಯರು ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
