ಬೆಳ್ತಂಗಡಿ, ಆಗಸ್ಟ್ 16: ನೆರಿಯ ಗ್ರಾಮದ ವಿಪತ್ತು ನಿರ್ವಹಣೆ ತಂಡದ ಸ್ವಯಂಸೇವಕರಾದ ಶ್ರೀ ನವೀನ್ ಅವರು ಸಕಲೇಶಪುರ ತಾಲೂಕಿನ ತನ್ನ ಸ್ನೇಹಿತ ಲತೇಶ್ ಅವರ ಮನೆ ವಿಪರೀತ ಗಾಳಿ,ಮಳೆಯ ಕಾರಣದಿಂದ ಕುಸಿದು ಬಿದ್ದಿರುವ ವಿಷಯವನ್ನು ತಿಳಿದು ಕೂಡಲೇ ನೆರಿಯ ಗ್ರಾಮದಲ್ಲಿರುವ ತನ್ನ ಸ್ನೇಹಿತರೊಂದಿಗೆ ಧಾವಿಸಿ ತಾತ್ಕಾಲಿಕ ಮನೆ ನಿರ್ಮಾಣ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ದಿನಾಂಕ 16ರ ರಾತ್ರಿ ಮನೆ ಕುಸಿದ ಬಗ್ಗೆ ಸ್ನೇಹಿತನಿಂಧ ವಿಷಯ ತಿಳಿದಿದೆ. ಕೂಡಲೇ ಸ್ಪಂದಿಸದಿದ್ದರೆ ವಿಪರೀತ ಮಳೆ ಸುರಿಯುತ್ತಿರುವ ಅಲ್ಲಿ ಆ ಕುಟುಂಬಕ್ಕೆ ಬಹಳ ತೊಂದರೆ ಕಟ್ಟಿಟ್ಟ ಬುತ್ತಿ ಎಂದುಕೊಂಡ ನವೀನ್ ಸ್ಥಳೀಯರಿಗೆ ಪರಿಸ್ಥಿತಿ ವಿವರಿಸಿದ್ದಾರೆ. ವಿಷಯ ತಿಳಿದ ಸ್ಥಳೀಯರು ತಡಮಾಡಲಿಲ್ಲ ಬೆಳಗ್ಗಿನ ಜಾವ ಐದು ಗಂಟೆಗೆ ಖಾಸಗಿ ವಾಹನವೊಂದನ್ನು ಬಾಡಿಗೆ ಪಡೆದು ಸಕಲೇಶಪುರದ ಮಾಗಡಿ ಕೊಡುಗೆ ಗ್ರಾಮಕ್ಕೆ ತೆರಳಿ ಸ್ನೇಹಿತನ ಮನೆ ತಲುಪಿದ್ದಾರೆ. ಸ್ಥಳದಲ್ಲಿಯೇ ಇರುವ ವಸ್ತುಗಳನ್ನು ಬಳಸಿ ತಾತ್ಕಲಿಕ ಶೆಡ್ ರಚನೆ ಮಾಡಿ ಕೊಟ್ಟು ಮನೆಯಲ್ಲಿರುವ ಸಾಮಾನುಗಳನ್ನು ಶೆಡ್ ಕಡೆಗೆ ಸಾಗಿಸಿ ಕುಡುಂಭಕ್ಕೆ ಮಳೆಯಿಂಧ ಯಾವುದೇ ತೊಂದರೆ ಆಗದಂತೆ ಸೇವಾ ಕಾರ್ಯ ನಿರ್ವಹಿಸಿರುತ್ತಾರೆ. ನೆರಿಯ ಗ್ರಾಮದ ಚಿದಾನಂದ, ಪ್ರಶಾಂತ್, ರಾಜೇಶ್, ನೀಲಯ್ಯ ಗೌಡ ಅವರು ನವೀನ್ ಅವರ ಕರೆಗೆ ಓಗೊಟ್ಟು ಸಕಲೇಶಪುರಕ್ಕೆ ತೆರಳಿ ಮನೆಭೇಟಿ ಮಾಡಿ ರಿಪೇರಿ ಮಾಡಿಕೊಟ್ಟ ಸಹವರ್ತಿಗಳು. ಸ್ನೇಹಿತನ ಕುಟುಂಬ ತೊಂದರೆಯಲ್ಲಿ ಇರುವಾಗ ತಕ್ಷಣ ಸ್ಪಂದಿಸಿದ ವಿಪತ್ತು ನಿರ್ವಹಣಾ ಘಟಕದ ಸದಸ್ಯ ನವೀನ್ ಅವರ ಸೇವಾ ಕಾರ್ಯ ಸಕಲೇಶಪುರ ಹಾಗೂ ನೆರಿಯ ಗ್ರಾಮದ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
