About Us

ಕಾರ್ಯದರ್ಶಿಯವರ ವರದಿ


ಮದ್ಯಪಾನಾದಿ ದುಶ್ಚಟಗಳ ವಿರುದ್ದ ವ್ಯಾಪಕವಾದ ಜನಾಂದೋಲನವನ್ನು ರೂಪಿಸಿದ ರಾಜ್ಯಮಟ್ಟದ ಏಕೈಕ ಸಂಸ್ಥೆಯೇ ಜನಜಾಗೃತಿ ವೇದಿಕೆ. ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಳೆದ ಎರಡುವರೆ ದಶಕಗಳಿಂದ ಸೇವೆ ನೀಡುತ್ತಾ ಬಂದಿರುವ ವೇದಿಕೆಯು ದುಶ್ಚಟ-ದುರಾಭ್ಯಾಸದಲ್ಲಿರುವ ಸಾವಿರಾರು ಕುಟುಂಬಗಳಿಗೆ ನೆಮ್ಮದಿಯ ಜೀವನ ನಡೆಸಲು ಅವಕಾಶ ಕಲ್ಪಿಸಿದೆ. ಕಳೆದ 25 ವರ್ಷಗಳಲ್ಲಿ ವೇದಿಕೆಯ ಬಹುತೇಕ ಎಲ್ಲಾ ನಿಯೋಜಿತ ಕಾರ್ಯಕ್ರಮಗಳನ್ನು ಗುರಿಮುಟ್ಟಲು ನಮಗೆ ಸಾಧ್ಯವಾಗಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ದುಶ್ಚಟ-ದುರಾಭ್ಯಾಸ ವಿರುದ್ದ ಜಾಗೃತಿ ಮೂಡಿಸುವ ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮಗಳನ್ನು ಎಲ್ಲಾ ಶಾಲಾ-ಕಾಲೇಜುಗಳಲ್ಲೂ ಹಮ್ಮಿಕೊಳ್ಳಲು ಪ್ರಯತ್ನಿಸಲಾಗಿದೆ. ಈ ನಿಟ್ಟಿನಲ್ಲಿ 784 ಸಂಪನ್ಮೂಲ ವ್ಯಕ್ತಿಗಳಿಗೆ ತರಭೇತುದಾರರ ತರಭೇತಿ ನೀಡಲಾಗಿದೆ. ಜಿಲ್ಲಾವಾರು ಸಾಧನೆಯ ವಿವರವನ್ನು ಚಟುವಟಿಕೆಗಳ ವಿವರಣೆಯಲ್ಲಿ ತಮಗೆ ನೋಡಬಹುದಾಗಿದೆ. ಅಲ್ಲದೆ ಪೂಜ್ಯರ ಮಾರ್ಗದರ್ಶನದಲ್ಲಿ 4 ಕಿರುಚಿತ್ರಗಳನ್ನು ರಚಿಸಲಾಗಿದೆ. ಇದರ ಸಮರ್ಪಕ ಅನುಷ್ಟಾನಕ್ಕೆ ಕ್ರೀಯಾಯೋಜನೆಯನ್ನು ಹಾಕಲಾಗಿದೆ. ನಗರ ಮತ್ತು ಗ್ರಾಮಗಳ ಪಂಚಾಯತ್ ಸದಸ್ಯರಿಗೆ ಗ್ರಾಮಸ್ವಾಸ್ಥ್ಯದ ಪಾಠ ಹೇಳುವಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಅಲ್ಲದೆ ಬೀದಿ ನಾಟಕ, ಕಾರ್ಯಾಗಾರ, ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಿ ಅರಿವು ಮೂಡಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಹೆಚ್ಚುವರಿ ಮದ್ಯದಂಗಡಿಗಳಿಗೆ ಲೈಸನ್ಸ್ ನೀಡದಂತೆ, ಪೇಟೆ-ಪಟ್ಟಣಗಳಲ್ಲಿರುವ ಮದ್ಯದಂಗಡಿಗಳನ್ನು ಸ್ಥಳಾಂತರಿಸದಂತೆ, ಅಂಗಡಿ ಮುಗ್ಗಟ್ಟುಗಳಲ್ಲಿ ಮದ್ಯಪಾನ ಮಾರಾಟ ಮಾಡದಂತೆ ಸರಕಾರಕ್ಕೆ ವರ್ಷಂಪ್ರತಿ ನಿಯೋಗ ತೆರಳಿ ಮನವಿ ನೀಡಲಾಗುತ್ತಿದೆ. ವೇದಿಕೆಯ ಸಮುದಾಯ ಮದ್ಯವರ್ಜನ ಶಿಬಿರಗಳು ಜನರ ಭಾಗವಹಿಸುವಿಕೆಯೊಂದಿಗೆ ಉತ್ತಮವಾಗಿ ನಡೆಸಲಾಗುತ್ತಿದೆ. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮದ್ಯವರ್ಜನ ಶಿಬಿರಗಳಿಗೆ ಇತ್ತೀಚೆಗೆ ಸಹಕರಿಸುತ್ತಿದ್ದಾರೆ. ವರ್ಷದಲ್ಲಿ 150 ಶಿಬಿರಗಳನ್ನು ನಡೆಸಿ ಹತ್ತು ಸಾವಿರಕ್ಕೂ ಮಿಕ್ಕಿದ ಜನರಿಗೆ ಚಿಕಿತ್ಸೆ ನೀಡುವುದಲ್ಲದೆ ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲು ಅನುಸರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ 3000ಕ್ಕೂ ಮಿಕ್ಕಿದ ನವಜೀವನ ಸಮಿತಿಗಳು ಕಾರ್ಯೋನ್ಮುಖವಾಗಿವೆ. ತಿಂಗಳಿಗೆ ಎರಡರಂತೆ ವಿಶೇಷ ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದೆ. ಈ ಶಿಬಿರಗಳಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಪ್ರತಿಷ್ಠಿತರು ಆಗಮಿಸಿ ಮದ್ಯಪಾನ ಮುಕ್ತರಾಗಿ ಜೀವನ ನಡೆಸುತ್ತಿದ್ದಾರೆ. ಈ ಶಿಬಿರಕ್ಕೆ ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡುವುದರಿಂದ ಈ ಶಿಬಿರವು ಬಹಳ ವೈಶಿಷ್ಟ್ಯತೆಗೆ ಮತ್ತು ವಿಶೇಷ ಬೇಡಿಕೆಗೆ ಕಾರಣವಾಗಿದೆ. ವೇದಿಕೆಯ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲು ಚಿಕಿತ್ಸಾ ತಂಡ ರಚಿಸಲಾಗಿದೆ. ನಮ್ಮಲ್ಲಿ 8 ಶಿಬಿರಾಧಿಕಾರಿಗಳು, 6 ಆರೋಗ್ಯ ಸಹಾಯಕರು ಶಿಬಿರ ನಿರ್ವಹಣೆಯಲ್ಲಿ ಸಕ್ರೀಯವಾಗಿದ್ದಾರೆ. ವ್ಯವಸ್ಥಾಪನಾ ಸಮಿತಿಗಳಿಗೆ ಶಿಬಿರ ಸಂಘಟನೆಯ ಮಾಹಿತಿ ನೀಡಲಾಗುತ್ತಿದೆ. ಸ್ಥಳೀಯ ವೈಧ್ಯರು, ಸಂಘಟನೆಗಳು, ಶಿಬಿರಕ್ಕೆ ಯಾವುದೇ ಫಲಾಪೇಕ್ಷೆಯಿಲ್ಲದೆ ಸಹಕರಿಸುತ್ತಿದ್ದಾರೆ. ನಮಗೆ ರಾಜ್ಯದ ಯಾವುದೇ ಸ್ಥಳದಲ್ಲಿಯೂ ಮದ್ಯವರ್ಜನ ಶಿಬಿರ ನಡೆಸಲು ತೊಂದರೆಗಳಿಲ್ಲ. ಸಣ್ಣಪುಟ್ಟ ಗಲಾಟೆ, ಗೊಂದಲಗಳು ಬಂದರೂ ಸ್ಥಳೀಯ ಪೋಲಿಸ್ ಅಧಿಕಾರಿಗಳು ಈ ನಿಟ್ಟಿನಲ್ಲಿ ಸಹಕರಿಸುತ್ತಿದ್ದಾರೆ. ಶೇ.20 ಜನರು ಪಾನಮುಕ್ತರಾದರೆ ಅದೊಂದು ಉತ್ತಮ ಸಾಧನೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಾರಿದರೆ ನಮ್ಮ ಸಂಸ್ಥೆಯ ಮೂಲಕ ನಡೆದ ಶಿಬಿರಗಳಲ್ಲಿ ಚಿಕಿತ್ಸೆಗೊಳಗಾದವರ ಪೈಕಿ ಶೇ.70 ಜನರು ಯಶಸ್ವಿಯಾಗಿರುವುದು ವೇದಿಕೆಯ ಮತ್ತು ಈ ವ್ಯವಸ್ಥೆಯಲ್ಲಿ ಶ್ರ್ರಮಿಸುತ್ತಿರುವವರ ಪ್ರಯತ್ನದ ಫಲವಾಗಿದೆ. ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷರಾದ ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ವೇದಿಕೆಯ ಎಲ್ಲಾ ಚಟುವಟಿಕೆಗಳ ಮಾರ್ಗದರ್ಶಕರೂ ಆಗಿದ್ದಾರೆ. ರಾಜ್ಯ ವೇದಿಕೆಯ ಸಭೆಗಳಿಗೆ ಭಾಗವಹಿಸುವುದರ ಮೂಲಕ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳಿಗೆ ಮತ್ತಷ್ಟು ದುಡಿಯಲು ಉತ್ಸಾಹವನ್ನು ನೀಡುತ್ತಿದ್ದಾರೆ. ಪೂಜ್ಯರ ವಿಶೇಷ ಕಾಳಜಿ ಮತ್ತು ಮಾರ್ಗದರ್ಶನದಿಂದ ವೇದಿಕೆಯ ಅಧ್ಯಕ್ಷ, ಪದಾಧಿಕಾರಿಗಳು, ಕಾರ್ಯಕರ್ತರು, ನವಜೀವನ ಸದಸ್ಯರು ಈ ಜನಾಂದೋಲನವನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಸುತ್ತಿದ್ದಾರೆ. ಮದ್ಯವರ್ಜನ ಶಿಬಿರಗಳ, ಜನಜಾಗೃತಿ ಕಾರ್ಯಕ್ರಮಗಳ ಬಹುತೇಕ ಖರ್ಚನ್ನು ಸಮುದಾಯದಿಂದಲೇ ಭರಿಸುತ್ತಿದ್ದಾರೆ. ಶಿಬಿರಗಳ ಮೂಲಕ ಪಾನಮುಕ್ತರಾದವರು ಕ್ಷೇತ್ರದ ಮೇಲಿನ ಭಕ್ತಿಯಿಂದ, ಪೂಜ್ಯರ ಮೇಲಿನ ಗೌರವದಿಂದ ವ್ಯಸನಬಿಟ್ಟು ನವಜೀವನ ಸಮಿತಿಯ ಮೂಲಕ ಒಟ್ಟು ಸೇರಿ ಉಳಿತಾಯ ಮಾಡುತ್ತಿದ್ದಾರೆ. ನವಜೀವನ ಸಮಿತಿಗಳಲ್ಲಿ ವಾರಕ್ಕೊಮ್ಮೆ ಒಟ್ಟು ಸೇರಿ ಅಭಿಪ್ರಾಯಗಳನ್ನು ಹಂಚಿಕೊಂಡು ಶುದ್ದ ಜೀವನವನ್ನು ನಡೆಸುತ್ತಿದ್ದಾರೆ, ಕುಡಿತ ಬಿಟ್ಟ ಪ್ರಥಮ ನೂರು ದಿನದ ಸಂಭ್ರಮಾಚರಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಮಾಡಿ ಪೂಜ್ಯರ ಆಶಿರ್ವಾದವನ್ನು ಪಡೆಯುವ ಮೂಲಕ ಆಚರಿಸುತ್ತಿದ್ದಾರೆ. ನವಜೀವನ ಸಮಿತಿಗಳನ್ನು ಸ್ಥಳೀಯ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ, ಸೇವಾಪ್ರತಿನಿಧಿಗಳು ನಿಗಾವಹಿಸುತ್ತಿದ್ದಾರೆ. ಜಿಲ್ಲಾ ವೇದಿಕೆ, ತಾಲೂಕು ವೇದಿಕೆ, ವಲಯ ವೇದಿಕೆ, ಗ್ರಾಮಸಮಿತಿಗಳು, ಸ್ವಯಂ ಸೇವಕರು ವೇದಿಕೆಯ ಯಶಸ್ವಿಗೆ ಸಹಕರಿಸುತ್ತಿದ್ದಾರೆ. ಎಲ್ಲಾ ಸಾಧನೆಯ ವಿವರಗಳನ್ನು ಮುಂದಿನ ಪುಟಗಳಲ್ಲಿ ತಾವು ಗಮನಿಸಬಹುದಾಗಿದೆ. ಈ ಸಂಧರ್ಭದಲ್ಲಿ ನಮ್ಮ ಗೌರವಾಧ್ಯಕ್ಷರಾದ ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರನ್ನು ಭಕ್ತಿಯಿಂದ ವಂದಿಸಿ ಆಶೀರ್ವಾದವನ್ನು ಬೇಡುತ್ತಿದ್ದೇನೆ. ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆಯವರು, ಶ್ರೀ ಡಿ.ಹರ್ಷೇಂದ್ರ ಕುಮಾರ್ ರವರ ಸಂಪೂರ್ಣ ಸಹಕಾರ ಮತ್ತು ಆಶೀರ್ವಾದಗಳಿಗೆ ಚಿರಋಣಿಯಾಗಿರುತ್ತೇನೆ. ಅಂತೆಯೇ ನಮ್ಮ ರಾಜ್ಯಾಧ್ಯಕ್ಷರಾದ ಶ್ರೀ ಸತೀಶ್ ಹೊನ್ನವಳ್ಳಿ, ನಿ.ಪೂ.ರಾಜ್ಯಾಧ್ಯಕ್ಷರಾದ ದೇವದಾಸ್ ಹೆಬ್ಬಾರ್, ಸ್ಥಾಪಕಾಧ್ಯಕ್ಷರಾದ ಶ್ರೀ ಕೆ.ವಸಂತ ಸಾಲ್ಯಾನ್, ವೇದಿಕೆಯ ಸಂಚಾಲಕರಾದ ಡಾ|ಎಲ್.ಎಚ್.ಮಂಜುನಾಥ್, ಪ್ರಾದೇಶಿಕ ನಿರ್ದೇಶಕರುಗಳು, 25 ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ/ತಾಲೂಕು ವೇದಿಕೆಯ ಕಾರ್ಯದರ್ಶಿಗಳು, ಆಹ್ವಾನಿತರು, ಕೋಅಪ್ಟ್ ಸದಸ್ಯರು, ದಾನಿಗಳು, ಎಲ್ಲಾ ಪದಾಧಿಕಾರಿಗಳನ್ನು ಈ ಸಂಧರ್ಭದಲ್ಲಿ ನೆನಪಿಸುತ್ತಾ ವಂದಿಸುತ್ತೇನೆ. ಅತೀ ಉತ್ಸಾಹದಿಂದ ಬೆಳ್ಳಿವರ್ಷದ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ನಮ್ಮ ತಂಡ ತಯಾರಿ ನಡೆಸುತ್ತಿದೆ. ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಪೂಜ್ಯರು ‘ಜಾಗೃತಿ ಸೌಧ’ವನ್ನು ವೇದಿಕೆಯ ಕಾರ್ಯಚಟುವಟಿಕೆಗಳಿಗೆ ನೀಡಿರುತ್ತಾರೆ. ಇದು ವ್ಯಸನಮುಕ್ತರಾಗಲು ಇಚ್ಚಿಸುವವರಿಗೆ, ಈ ನಿಟ್ಟಿನಲ್ಲಿ ಸೇವೆ ನೀಡಲು ಬಯಸುವವರಿಗೆ ಮತ್ತು ಮಾಹಿತಿ ಮತ್ತು ತರಭೇತಿ ಪಡೆಯಲು ಅನುಕೂಲವಾಗುವ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಈ ಸಂಸ್ಥೆಯಲ್ಲಿ ವ್ಯವಸ್ಥಿತ ಮತ್ತು ವೈಜ್ಞಾನಿಕ ಚಿಕಿತ್ಸೆಗೆ ಪೂರಕವಾಗಿ ವಾಚನಾಲಯ, ವಸ್ತುಪ್ರದರ್ಶನ, ಸಂಪನ್ಮೂಲ ಕೇಂದ್ರವನ್ನಾಗಿ ರೂಪಿಸಲಾಗುವುದು. ಶಾಲಾ ಕಾಲೇಜಿನ ಮಕ್ಕಳು ಈ ಸಂಸ್ಥೆಗೆ ಭೇಟಿ ನೀಡಿ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಪಾನಮುಕ್ತರಾದ ಸದಸ್ಯರು ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳುವಂತೆ ಕಾರ್ಯಕ್ರಮವನ್ನು ರೂಪಿಸಲಾಗುವುದು. ವೇದಿಕೆಯ ಸಂಪರ್ಕವನ್ನು ಸದಾ ಇಟ್ಟುಕೊಳ್ಳಲು ಸಹಾಯವಾಣಿಯನ್ನು ಮಾಡಲಾಗುವುದು. ಹೀಗೆ ಸದೃಢ ಭಾರತ, ಸ್ವಸ್ಥ ಸಮಾಜವನ್ನು ರೂಪಿಸಿ ಸಶಕ್ತ ದುಶ್ಚಟಮುಕ್ತ ಸಮಾಜವನ್ನು ಕಟ್ಟುವಲ್ಲಿ ತಾವೆಲ್ಲರೂ ಸಹಕರಿಸಬೇಕಾಗಿ ವಿನಂತಿ.

                                                                                                                                                                                                                      ಇತೀ,

                                                                                                                                                                                                                            ಶ್ರೀ  ವಿವೇಕ್ ವಿ.ಪಾೈಸ್

                                                                                                                                                                                                                                ಕಾರ್ಯದರ್ಶಿ/ ನಿರ್ದೇಶಕರು