ಮದ್ದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike News

ಮದ್ದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗೀತಾ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರು ಧರ್ಮಸ್ಥಳ ಕ್ಷೇತ್ರದ ಪೂಜ್ಯರ ಪ್ರತಿಯೊಂದು ಕಾರ್ಯಕ್ರಮ ಸಮಾಜಕ್ಕೆ ಮೀಸಲು, ಹದಿಹರೆಯದ ಈ ಪ್ರೌಢ ವಯಸ್ಸಿನಲ್ಲಿ ನೀವು ದಾರಿ ತಪ್ಪಿ ದುಶ್ಚಟಗಳ ದಾಸರಾಗಬಾರದು ಅನ್ನುವ ದೃಷ್ಟಿಯಲ್ಲಿ ಈ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ನಮ್ಮ ಪುಣ್ಯ ಎಂದು ಪೂಜ್ಯರ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿದರು. ಜಿಲ್ಲಾ ನಿರ್ದೇಶಕರಾದ ಚೇತನಾ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳ ಭವಿಷ್ಯದಲ್ಲಿ ಆರೋಗ್ಯ, ಶಿಕ್ಷಣ ಹಾಗೂ ನೈತಿಕ ಶಿಕ್ಷಣ ತುಂಬಾ ಪ್ರಾಮುಖ್ಯತೆ ವಹಿಸುತ್ತದೆ, ಆದರೆ ಈ ಸಮಾಜದಲ್ಲಿ ದುಶ್ಚಟದಿಂದ ಮಕ್ಕಳು ದಾರಿ ತಪ್ಪುತ್ತಿರುವುದು ಸತ್ಯವಾಗಿದೆ. ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವೂ ಪ್ರಾಮುಖ್ಯವನ್ನು ಹೊಂದಿದ್ದು ನಮ್ಮ ಸಂಸ್ಕಾರ ಮತ್ತು ನಾವು ಒಳಗೊಂಡಿರಬೇಕಾದಂತ ಹವ್ಯಾಸಗಳನ್ನು ಮನೆಯಲ್ಲಿ ತಂದೆ ತಾಯಿಯರು ಹೇಳಿಕೊಡಬೇಕು ಹಾಗೂ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದರ ಬಗ್ಗೆ ಮಕ್ಕಳಾದ ನೀವು ಕುಲಂಕುಶವಾಗಿ ತಿಳಿದು ಸರಿ ದಾರಿಯಲ್ಲಿ ನಡೆದರೆ ಭವಿಷ್ಯ ಪ್ರಜ್ವಲವಾಗುತ್ತದೆ. ತಂದೆ ತಾಯಿಯರು ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕೆಂದು ಶಿಕ್ಷಣವನ್ನು ಕೊಡಿಸುತ್ತಿದ್ದಾರೆ ಆದರೆ ನಾವುಗಳು ದುಶ್ಚಟದ ಅಭ್ಯಾಸಗಳಿಂದ ಅದರ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಪುಸ್ತಕ ಓದುವುದು, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು, ಸಮಾಜಮುಖಿ ಕೆಲಸದಲ್ಲಿ ಭಾಗಿಯಾಗುವುದನ್ನೂ ಹವ್ಯಾಸ ಮಾಡಿಕೊಳ್ಳಿ. ತಂದೆ ತಾಯಿಯರಿಗೆ, ಗುರು ಹಿರಿಯರಿಗೆ ಗೌರವ ನೀಡಿ ಎಂದು ತಿಳಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದಂತಹ ಶ್ರೀ ಮುರಳೀಶ್ ರವರು ಮಾತನಾಡಿ ದುಷ್ಟಟಗಳಿಂದ ಹೇಗೆ ನಾವು ದೂರ ಉಳಿಯಬೇಕು ಹಾಗೂ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಹೇಗೆ ಉತ್ತಮವಾಗಿ ಕಾಪಾಡಿಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿ ನೀಡಿದರು. ಸಿಗರೇಟ್ ಗುಟುಕಾ, ಬೀಡಿ, ಆಲ್ಕೋಹಾಲ್ ಸೇವನೆಯಿಂದ ಬರುವಂತಹ ಕಾಯಿಲೆಗಳ ಬಗ್ಗೆ ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರು ಶ್ರೀ ಲಿಂಗೇಗೌಡ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ಗುರುಸ್ವಾಮಿ, ಕ್ಷೇತ್ರ ಯೋಜನಾಧಿಕಾರಿ ಶ್ರೀ ಬಿ. ಆರ್. ಯೋಗೀಶ್ ಕನ್ಯಾಡಿ, ವಲಯದ ಮೇಲ್ವಿಚಾರಕರಾದ ಚೈತ್ರ, ಸೇವಾ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.