ಮಂಜೇಶ್ವರ ತಾಲೂಕಿನಲ್ಲಿ ಗಾಂಧಿಜಯಂತಿ ಪ್ರಯುಕ್ತ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ

Janajagurthi Vedike News

ಉಡುಪಿ ಪ್ರಾದೇಶಿಕ ವಿಭಾಗದ ದಕ್ಷಿಣ ಕನ್ನಡ 2 ಜಿಲ್ಲಾ ವ್ಯಾಪ್ತಿಯ ಮಂಜೇಶ್ವರ ತಾಲ್ಲೂಕಿನಲ್ಲಿ ಗಾಂಧಿಜಯಂತಿ ಪ್ರಯುಕ್ತ ಗಾಂಧಿಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ತಾಲ್ಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿಯವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಂಡೇವೂರು ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಎಲ್ಲಾ ನವಜೀವನ ಸಮಿತಿ ಸದಸ್ಯರಿಗೆ ಹೂ ನೀಡಿ ಅಭಿನಂದಿಸಿ, ನಾವು ನಮ್ಮ ದುಶ್ಚಟಗಳು ಮಾತ್ರವಲ್ಲ ನಮ್ಮ ಮನಸ್ಸಿನಲ್ಲಿರುವ ದುಷ್ಟ ಆಲೋಚನೆ, ಜಾತಿ ಭೇದ ಎಲ್ಲಾ ಮರೆತು ಉತ್ತಮ ಮನುಷ್ಯರಾಗಿ ಬಾಳೋಣ ಎಂದು ಆಶೀರ್ವಚನವಿತ್ತರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ತಾಲ್ಲೂಕಿನ ಸನ್ಮಾನ್ಯ ಶಾಸಕರಾದ ಶ್ರೀ ಎ. ಕೆ. ಎಂ. ಅಶ್ರಫ್ ರವರು ನೆರವೇರಿಸಿ ಪೂಜ್ಯರೊಂದಿಗಿನ ತನ್ನ ಒಡನಾಟದ ಬಗ್ಗೆ ತಿಳಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಉತ್ತಮ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ 2 ಜಿಲ್ಲೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರವೀಣ್ ಕುಮಾರ್ ರವರು ಭಾಗವಹಿಸಿ, ಜನಜಾಗೃತಿ ವೇದಿಕೆಯ ಮೂಲಕ ನಡೆಸ್ಪಡುವ ಮದ್ಯವರ್ಜನ ಶಿಬಿರಗಳಲ್ಲಿ ಬಾಗವಹಿಸಿದ ಸದಸ್ಯರ ಬದುಕು ಬದಲಾದ ಬಗ್ಗೆ ತಿಳಿಸಿ, ಇಂತಹ ಉತ್ತಮ ಕಾರ್ಯಕ್ರಮಗಳಲ್ಲಿ ಬಾಗವಹಿಸಿ, ಮಾಹಿತಿ ಪಡೆದು ತಮ್ಮ ಕುಟುಂಬ ಹಾಗೂ ಸಮಾಜದಲ್ಲಿರುವ ದುಶ್ಚಟಗಳನ್ನು ದೂರ ಮಾಡುವಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಪೈವಳಿಕೆ ಗ್ರಾಮ ಪಂಚಾಯತ್ ಅದ್ಯಕ್ಷರಾದ ಶ್ರೀಮತಿ ಜಯಂತಿ, ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಶ್ರೀ ಗೋಪಾಲ್ ಶೆಟ್ಟಿ ಅರಿಬೈಲ್, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಅಶ್ವಥ್ ಪೂಜಾರಿ ಲಾಲ್ಭಾಗ್, ಉಪಾಧ್ಯಕ್ಷರಾದ ಶ್ರೀ ಹರೀಶ್ ಶೆಟ್ಟಿ ಕಡಂಬಾರ್, ಎಲ್ಲಾ ವಲಯಗಳ ವಲಯಾಧ್ಯಕ್ಷರುಗಳು, ಕೇಂದ್ರ ಒಕ್ಕೂಟ ಅಧ್ಯಕ್ಷರಾದ ಶ್ರೀ ಉದಯಕುಮಾರ್ ಆನೆಬಾಗಿಲು ಹಾಗೂ ಊರಿನ ಇತರ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರುಗಳು, ಭಜನಾ ಪರಿಷತ್ತು ಪದಾಧಿಕಾರಿಗಳು, ತಾಲ್ಲೂಕಿನ ಯೋಜನಾಧಿಕಾರಿ, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ನವಜೀವನ ಸಮಿತಿ ಸದಸ್ಯರು, ಶೌರ್ಯ ಘಟಕ ಸದಸ್ಯರು, ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾದಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.