ಬೆಳ್ತಂಗಡಿಯಲ್ಲಿ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ

Janajagurthi Vedike News

ಮದ್ಯವರ್ಜನ ಶಿಬಿರದಿಂದಾಗಿ ಹಲವಾರು ಮಂದಿಯ ಬದುಕಿನ ಕತ್ತಲೆ ದೂರವಾಗಿದೆ. ಗಾಂಧೀಜಿಯವರ ತತ್ವಾದರ್ಶದಂತೆ ನಡೆದುಕೊಳ್ಳುತ್ತಿರುವ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮದ್ಯಮುಕ್ತ ಸಮಾಜದ ಕಲ್ಪನೆಗೆ ಒತ್ತು ಕೊಟ್ಟಿದ್ದಾರೆ ಎಂದು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಧರ್ಮದರ್ಶಿ ಹರೀಶ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ ಸಹಯೋಗದೊಂದಿಗೆ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರಗಿದ ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸಂದೇಶ ನೀಡಿದ ಧರ್ಮಗುರು ಹಾಗೂ ಪತ್ರಕರ್ತರಾಗಿರುವ ಕೆ. ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಮಾತನಾಡಿ ಕುಡಿತ ಎಂಬುದು ಎಲ್ಲಾ ಕೆಡುಕುಗಳಿಗೆ ಕಾರಣ ಎಂದು ಪ್ರವಾದಿ ಪೈಗಂಬರ್ ಕಲಿಸಿಕೊಟ್ಟಿದ್ದಾರೆ. ಆರ್ಥಿಕ ನಷ್ಟಕ್ಕಿಂತ ನೈತಿಕ ನಷ್ಟ ಬಹಳ ಅಪಾಯಕಾರಿ. ರೋಗದಿಂದ ವ್ಯಕ್ತಿ ಮಾತ್ರ ನೋವು ಅನುಭವಿಸಿದರೆ ಮದ್ಯಪಾನದಂತಹಾ ವ್ಯಸನದಿಂದ ಆತನ ಇಡೀ ಕುಟುಂಬ ಮತ್ತು ಸಮಾಜ ನೋವು ಅನುಭವಿಸಬೇಕಾಗುತ್ತದೆ. ಮೋದಿಯವರು ಹೆಗ್ಗಡೆಯವರನ್ನು ದೆಹಲಿಯ ರಾಜ್ಯ ಸಭೆಯವರೆಗೆ ಕೊಂಡೋಗಿದ್ದು, ಈ ಮದ್ಯವರ್ಜನ ಅಭಿಯಾನವನ್ನೂ ಅಲ್ಲಿಯವರೆಗೆ ಕೊಂಡೋಗಿ ಮದ್ಯಮುಕ್ತ‌ಭಾರತ ಅಥವಾ ಕನಿಷ್ಟ ಮದ್ಯಮುಕ್ತ ಕರ್ನಾಟಕವನ್ನಾದರೂ ಕಾಣುವಂತಾಗಲಿ ಎಂದು ಆಶಿಸಿದರು. ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ರೆ. ಫಾ ಕ್ಲಿಫರ್ಡ್ ಪಿಂಟೋ ಸಂದೇಶ ನೀಡಿ ಒಳ್ಳೆಯ ಕೆಲಸಕ್ಕೆ ನಾಳೆ ಎಂಬ ದಿನ ಇಡದೆ ಅದನ್ನು ಇವತ್ತಿನಿಂದಲೇ ಪ್ರಾರಂಭಿಸೋಣ. ನಮ್ಮಲ್ಲಿ ಹಗೆತನ ಇಲ್ಲದೆ ಶಾಂತಿ ನೆಲೆಸಬೇಕು. ಅದಕ್ಕಾಗಿ ದುಶ್ಚಟಮುಕ್ತ ಸಮಾಜ ನಿರ್ಮಾಣ ಆಗಬೇಕು. ನಾವು ನವಜೀವನ ಆರಂಭಿಸಬೇಕಾದರೆ ಮೊದಲು ನಮ್ಮ ತಪ್ಪಿನ ಅರಿವು ನಮಗೆ ಆಗಬೇಕು ಎಂದರು. ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶ್ರೀ ಕಾಸಿಂ ಮಲ್ಲಿಗೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂತಹಾ ಒಂದು‌ ಒಳ್ಳೆಯ ಉದ್ಧೇಶಕ್ಕೆ ನಾವೆಲ್ಲಾ ಜೊತೆ ಸೇರಿದ್ದೇವೆ ಎಂಬುದೇ ಒಂದು ಸಂತೋಷದ ವಿಚಾರ‌. ಇಲ್ಲಿರುವ ಎಲ್ಲಾ ಧರ್ಮದ ಮುಖಂಡರೂ ಸದಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಾಂಧೀಜಿಯವರ ತತ್ವ ಮತ್ತು ಆದರ್ಶವನ್ನು ಪಾಲಿಸುತ್ತಿರುವ ಏಕೈಕ ಕ್ಷೇತ್ರವೆಂದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಪೂಜ್ಯ ಖಾವಂದರು ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಶ್ರೀ ಕೆ. ಪ್ರತಾಪಸಿಂಹ ನಾಯಕ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಶ್ರೀ ಕೆ. ವಸಂತ ಸಾಲ್ಯಾನ್, ಜಿಲ್ಲಾಧ್ಯಕ್ಷ ಶ್ರೀ ಪದ್ಮನಾಭ ಶೆಟ್ಟಿ, ವಿಮಾ ವಿಭಾಗದ ಕೇಂದ್ರ ಕಚೇರಿ ಪ್ರಾದೇಶಿಕ ನಿರ್ದೇಶಕ ಶ್ರೀ ವಸಂತ ಸಾಲ್ಯಾನ್, ಬೆಳ್ತಂಗಡಿ ವಿಭಾಗದ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರಾದ ಶ್ರೀ ಸೀತಾರಾಮ ಆರ್., ಗುರುವಾಯನಕೆರೆ ವಿಭಾಗದ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸದಾನಂದ ಬಂಗೇರ, ಬ್ಯಾಂಬೋ ಇಂಡಿಯಾ ನಿರ್ದೇಶಕರಾದ ಶ್ರೀ ಶ್ರೀಧರ್, ತಾಲೂಕಿನ ವಿವಿಧ ವಲಯಗಳ ವಲಯಾಧ್ಯಕ್ಷರುಗಳಾದ ಶ್ರೀ ಸತೀಶ್ ಶೆಟ್ಟಿ, ಶ್ರೀ ನಾಮದೇವ ರಾವ್, ಪುಷ್ಪಾ ಆರ್. ಶೆಟ್ಟಿ, ಶ್ರೀ ಮೋಹನ್ ಗೌಡ, ಶ್ರೀ ಚಂದ್ರಶೇಖರ, ಶ್ರೀ ಪುರುಷೋತ್ತಮ, ಶ್ರೀ ವಸಂತ ಸುವರ್ಣ, ಶ್ರೀ ರಾಜೇಶ್ ಎಂ. ಕೆ., ಶ್ರೀ ರಾಜೇಂದ್ರ ಇಂದ್ರ, ಶ್ರೀ ಮೋಹನ್ ಅಂಡಿಂಜೆ, ಪ್ರಫುಲ್ಲಚಂದ್ರ, ಶ್ರೀ ಪ್ರಭಾಕರ ಗೌಡ ಪೊಸೊಂದೋಡಿ, ಶ್ರೀ ಪದ್ಮನಾಭ ಸಾಲಿಯಾನ್, ಶ್ರೀ ನಿತ್ಯಾನಂದ ನಾವರ, ಶ್ರೀ ನಾರಾಯಣ ಸಾಲ್ಯಾನ್, ಶ್ರೀ ಹರೀಶ್ ಸಾಲ್ಯಾನ್, ಶ್ರೀ ನೇಮಿರಾಜ್ ಸೀಮಿತ ಉಪಸ್ಥಿತರಿದ್ದರು.