ಬೆಳ್ತಂಗಡಿ, ಆಗಸ್ಟ್ 16: ನಡ ಗ್ರಾಮದ ಬೋಜಾರ ಬೈಲಿನಲ್ಲಿರುವ ಕಿಂಡಿ ಅಣೆಕಟ್ಟುಗಳಲ್ಲಿ ಅತಿ ಮಳೆಯ ಕಾರಣದಿಂದ ಭಾರೀ ಗಾತ್ರದ ಮರಗಳು ತೇಲಿಕೊಂಡು ಬಂದು ಅಣೆಕಟ್ಟಿನ ಕಿಂಡಿಗಳಿಗೆ ಸಿಲುಕಿಕೊಂಡಿತ್ತು. ಪರಿಣಾಮ ನೀರು ಸೇತುವೆಯ ಪಕ್ಕದ ಸ್ಥಳದಲ್ಲಿ ಹರಿದುಹೋಗಲಾರಂಭಿಸಿತ್ತು. ತುರ್ತಾಗಿ ಮರಮುಟ್ಟಗಳನ್ನು ತೆರವುಗೊಳಿಸದಿದ್ದರೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇತ್ತು. ನದಿಯ ನೀರು ಕಿಂಡಿ ಅಣೆಕಟ್ಟಿನಿಂದ ಹರಿದು ಹೋಗಲು ಸಾಧ್ಯವಿಲ್ಲದೇ ಪಕ್ಕದಲ್ಲೇ ಕಾಲುವೆ ನಿರ್ಮಿಸಿಕೊಂಡು ಹರಿಯಲಾರಂಭಿಸಿತ್ತು. ಇದನ್ನು ಉಪೇಕ್ಷಿಸಿದರೆ ಸುತ್ತಲಿನ ಹದಿನೈದಕ್ಕೂ ಅಧಿಕ ಮನೆಗಳು ಮತ್ತು ನೂರಾರು ಎಕರೆ ಅಡಿಕೆ ಹಾಗೂ ರಬ್ಬರ್ ತೋಟಗಳು ನೆಲಕ್ಕೆ ಉರುಳುವ ಅಪಾಯವಿತ್ತು. ಇದನ್ನು ಮನಗಂಡ ಸ್ಥಳೀಯರು ಮರಮುಟ್ಟುಗಳನ್ನು ತೆರವುಗೊಳಿಸಲು ವಿಪತ್ತು ನಿರ್ವಹಣಾ ತಂಡದ ಸಹಾಯ ಅಪೇಕ್ಷಿಸಿದ್ದರು. ಕೂಡಲೇ ಧಾವಿಸಿದ ತಂಡ ನಿರಂತರ ಶ್ರಮವಹಿಸಿ ಕಿಂಡಿ ಅಣೆಕಟ್ಟು ಸ್ವಚ್ಛಗೊಳಿಸಿ ಸಂಭಾವ್ಯ ಅನಾಹುತಗಳನ್ನು ತಪ್ಪಿಸಿದ್ದಾರೆ.
ನಡ/ ಕನ್ಯಾಡಿ ವಿಪತ್ತು ನಿರ್ವಹಣೆ ತಂಡದ ಸ್ವಯಂಸೇವಕರಾದ ಮಂಜುನಾಥ್ ನಡ, ಕಾರ್ತಿಕ್ ನಡ, ಒಲಿವಿನ್ ಡಿಸೋಜಾ ನಡ, ಹರ್ಷದ್ ನಡ, ಮೋಹನ್ ಕನ್ಯಾಡಿ, ಅನಿಲ್ ಡೇಸಾ ಕನ್ಯಾಡಿ ಹಾಗೂ ಸ್ಥಳೀಯರಾದ ಗ್ರಾಮ ಪಂಛಾಯತ್ ಸದಸ್ಯರಾದ ಕರುಣಾಕರ ಗೌಡ, ಮೋಹನ ಗೌಡ, ವೆಂಕಪ್ಪ ಗೌಡ, ಚಂದಪ್ಪ ಗೌಡ, ಹೇಮಂತ್ ಗೌಡ, ರಾಮ್ ದಾಸ್ ಗೌಡ, ತುಕರಾ ಗೌಡ, ದಾಸಣ್ಣ ಗೌಡ, ಪ್ರಕಾಶ್ ಗೌಡ, ಬೌತೀಸ್, ದೂಜ ಡಿಸೋಜಾ, ಸಿರಿಲ್ ಡಿಸೋಜಾ, ಅರಿವಿನ್, ತೋಮಸ್ ಡಿಸೋಜಾ, ಓಬಯ್ಯ, ಚನ್ನಕೇಶವ ಗೌಡ ಅವರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣೆ ಘಟಕದ ಯೋಜನಾಧಿಕಾರಿ ಜೈವಂತ್ ಪಟಗಾರ, ವಿಪತ್ತು ನಿರ್ವಹಣೆ ಘಟಕದ ಸಂಯೋಜಕಿಯಾದ ವಸಂತಿ, ಸ್ಥಳೀಯ ಸೇವಾಪ್ರತಿನಿಧಿ ಉಪಸ್ಥಿತರಿದ್ದರು.