ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಉಡುಪಿ ಪ್ರಾದೇಶಿಕ ವಿಭಾಗ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಉಡುಪಿ ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಕಾರ್ಯಕಾರಿ ಸಮಿತಿ ಸಭೆ ಉಡುಪಿಯ ಪ್ರಗತಿ ಸೌಧದಲ್ಲಿ ನಡೆಯಿತು. ಸಭೆಯ ಉದ್ಘಾಟನೆಯನ್ನು ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ದೇವದಾಸ್ ಹೆಬ್ಬಾರ್ ರವರು ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಶ್ರೀ ನವೀನ್ ಚಂದ್ರ ಶೆಟ್ಟಿ ರಟ್ಟಾಡಿಯವರು ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ನಾಗರಾಜ ಶೆಟ್ಟಿರವರು ಗತ ಸಭೆಯ ವರದಿ ವಾಚಿಸಿದರು. ಉಡುಪಿ, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಕಾಪು, ಬೈಂದೂರು, ಕುಂದಾಪುರ 1, ಕುಂದಾಪುರ 2 ತಾಲೂಕುಗಳ ಸಾಧನ ವರದಿಯನ್ನು ತಾಲೂಕು ಕಾರ್ಯದರ್ಶಿಗಳು/ಯೋಜನಾಧಿಕಾರಿಗಳು ಸಭೆಯಲ್ಲಿ ಮಂಡಿಸಿದರು. ಈ ಸಂದರ್ಭ 2024 -25 ನೇ ಸಾಲಿನಲ್ಲಿ ನಡೆದ ಮದ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಮಾದಕ ವಸ್ತು ವಿರೋಧಿ ದಿನಾಚರಣೆ, ವಿಶ್ವ ತಂಬಾಕು ವಿರೋಧಿ ದಿನಾಚರಣೆ, ನವಜೀವನೋತ್ಸವ ಕಾರ್ಯಕ್ರಮ, ಶತದಿನೋತ್ಸವ ಕಾರ್ಯಕ್ರಮ ಮತ್ತು ನಾಟಿ ಮಾಡಿದ ಗಿಡಗಳ ಅನುಪಾಲನೆ ಇವುಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲೆಯಲ್ಲಿ ನವಜೀವನ ಪೋಷಕರ ಕರ್ತವ್ಯ ನಿರ್ವಹಣೆ ಕುರಿತು ಚರ್ಚೆ ಮತ್ತು ವಲಯಕ್ಕೊಂದು ನವಜೀವನ ಸಮಿತಿ ವಿಚಾರದಂತೆ ಆದ ಪ್ರಗತಿಯ ಪರಿಶೀಲನೆ ನಡೆಸಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಮತ್ತು ತಾಲೂಕುವಾರು ಕೋ ಆಪ್ಟ್ ಸದಸ್ಯರ ಅಂತಿಮ ಪಟ್ಟಿಯನ್ನು ಸಭೆಯಲ್ಲಿಟ್ಟು ಮಂಜೂರು ಮಾಡಲಾಯಿತು. ಮದ್ಯವರ್ಜನ ಶಿಬಿರಗಳನ್ನು ಪರಿಣಾಮಕಾರಿಯಾಗಿ ನಡೆಸುವಂತೆ, ಹೆಚ್ಚು ಹೆಚ್ಚು ಶಾಲಾ-ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ, ಮಕ್ಕಳಿಗೆ ವಿಶೇಷವಾಗಿ ಪ್ರಬಂಧ ಸ್ಪರ್ಧೆ ಮತ್ತು ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ನಡೆಸುವಂತೆ, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರ ಬದಲಾವಣೆಯ ಬಗ್ಗೆ ಸಮಗ್ರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಎಲ್ಲ ತಾಲೂಕಿನ ಜಿಲ್ಲಾ ವೇದಿಕೆಯ ಸದಸ್ಯರು, ತಾಲೂಕು ವೇದಿಕೆಯ ಕಾರ್ಯದರ್ಶಿಗಳು, ಜಿಲ್ಲಾ ಕಛೇರಿಯ ಎಂಐಸಿ ಯೋಜನಾಧಿಕಾರಿಗಳು, ಪ್ರಾದೇಶಿಕ ಕಛೇರಿ ಆಡಳಿತ ಯೋಜನಾಧಿಕಾರಿಗಳು ಮತ್ತು ಜಿಲ್ಲಾ ಪ್ರಬಂಧಕರು ಉಪಸ್ಥಿತರಿದ್ದರು.
