ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಂಗಳೂರು ಗ್ರಾಮಾಂತರ/ನಗರ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ದೇವನಹಳ್ಳಿ ತಾಲೂಕಿನ ಚಪ್ಪರದಕಲ್ಲು ಕೃಷ್ಣೋದಯ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಗಣ್ಯಮಾನ್ಯರನ್ನು ಕೆ ಆರ್ ಪುರಂ ಯೋಜನಾ ಕಛೇರಿಯ ಯೋಜನಾಧಿಕಾರಿ ಶ್ರೀಯುತ ಪುರುಷೋತ್ತಮ್ ರವರು ಸ್ವಾಗತಿಸಿದರು. ವೇದಿಕೆಯಲ್ಲಿ ಆಸೀನರಿದ್ದ ಗಣ್ಯಮಾನ್ಯರು ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಂಗಳೂರು ಗ್ರಾಮಾಂತರ/ನಗರ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ನೂತನ ಪದಾಧಿಕಾರಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರು ಪುಷ್ಪವನ್ನು ನೀಡುವ ಮೂಲಕ ಸ್ವಾಗತವನ್ನು ಕೋರಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಗೌರವಾನ್ವಿತ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಶೀನಪ್ಪ ಎಂ. ರವರು ಪ್ರಾಸ್ತಾವಿಕವಾಗಿ ಮಾತನಾಡಿ ಬೆಂಗಳೂರು ಗ್ರಾಮಾಂತರ/ನಗರ ಜಿಲ್ಲೆಯ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಸಭೆಯಲ್ಲಿ ಸೇರಿರುವುದು ಖುಷಿ ತಂದ ವಿಚಾರ ಎಂದರು. ಎಲ್ಲಾ ರಂಗದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದು ಕ್ಷೇತ್ರದ ಮೇಲಿನ ಭಕ್ತಿ ಮತ್ತು ನಂಬಿಕೆಯಿಂದ ಹಾಗೂ ಪೂಜ್ಯರ ಸಮಾಜಮುಖಿ ಕಾರ್ಯಕ್ರಮಗಳಿಂದ ಎಂದರು. ಸಮಾಜ ಸೇವೆಗಳಲ್ಲಿ ಶೌರ್ಯ ಘಟಕದ ಮೂಲಕ ರಾಜ್ಯದ ನಾನಾ ಭಾಗಗಳಲ್ಲಿ ಶೌರ್ಯ ತಂಡದ ಸದಸ್ಯರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆಯನ್ನು ಸಲ್ಲಿಸುತ್ತಿರುವುದು ಸಂತೋಷದಾಯಕ ವಿಷಯವಾಗಿದೆ ಎಂದು ತಿಳಿಸಿದರು. ಪೂಜ್ಯರು ರೈತರಿಗಾಗಿ ಕೆರೆ ಹೂಳೆತ್ತುವ ಕಾರ್ಯವನ್ನು ಕೈಗೊಂಡಿದ್ದಾರೆ, ದೇವಸ್ಥಾನ, ರುದ್ರಭೂಮಿ, ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರು, ಬೆಂಚು/ಡೆಸ್ಕ್ ವಿತರಣೆ, ಹಾಲು ಉತ್ಪಾದಕರ ಕಟ್ಟಡಕ್ಕೆ ಅನುದಾನ, ಶುದ್ಧ ನೀರಿನ ಘಟಕ ಸೇರಿ ಹಲವಾರು ಸೇವೆಗಳನ್ನು ನೀಡುತ್ತಾ ಬಂದಿದ್ದಾರೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯಕ್ರಮವು ವಿಶಿಷ್ಟವಾದ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮದ ಪಲಶ್ರುತಿಯಿಂದ ಮಧ್ಯವರ್ಜನ ಶಿಬಿರಕ್ಕೆ ಸೇರಿ ಸುಮಾರು ಒಂದು ಲಕ್ಷದ ಐವತ್ತು ಸಾವಿರ ಮಂದಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ತಿಳಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ ಹಾಗೂ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.
