ಕರಾಯ ಸರಕಾರಿ ಪ್ರೌಢ ಶಾಲೆಯಲ್ಲಿ ” ಸ್ವಾಸ್ಥ್ಯ ಸಂಕಲ್ಪ ” ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಗುರುವಾಯನಕೆರೆ ತಾಲೂಕು, ತಾಲೂಕು ಜನಜಾಗೃತಿ ವೇದಿಕೆ ಬೆಳ್ತಂಗಡಿ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ತಣ್ಣೀರುಪಂತ ವಲಯ, ಜನಜಾಗೃತಿ ವೇದಿಕೆ ತಣ್ಣೀರುಪಂತ ವಲಯ ಮತ್ತು ಸರಕಾರಿ ಪ್ರೌಢ ಶಾಲೆ ಕರಾಯ ಇವರುಗಳು ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ರಾಜರ್ಷಿ ಡಾll ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾll ಹೇಮಾವತಿ ವಿ.ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ವಿದ್ಯಾರ್ಥಿಗಳಿಗೆ ” ಸ್ವಾಸ್ಥ್ಯ ಸಂಕಲ್ಪ ” ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಸಾಂಕೇತಿಕವಾಗಿ ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಶ್ರೀ ಪ್ರಭಾಕರ ಗೌಡ ಪೊಸಂದೋಡಿ ವಲಯಾಧ್ಯಕ್ಷರು ಜನಜಾಗೃತಿ ವೇದಿಕೆ ತಣ್ಣೀರುಪಂತ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ಶ್ರೀ ನಂದಕುಮಾರ್ ಪಿ ಪಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಮಾದಕ ವ್ಯಸನವೆಂಬುದೊಂದು ರೋಗ. ವಿದ್ಯಾರ್ಥಿಗಳ ವಯಸ್ಸು ಹದಿಹರೆಯದ ವಯಸ್ಸು. ಹದಿಹರೆಯದಲ್ಲಿನ ಒತ್ತಡಗಳು, ತಂದೆ – ತಾಯಂದಿರ ಒತ್ತಡ, ಸ್ನೇಹಿತರ ಒತ್ತಡ, ಜೀವನ ಶೈಲಿ, ಮಾಧ್ಯಮ, ಆರ್ಥಿಕ ಸ್ವಾತಂತ್ರ್ಯ, ಪ್ರೀತಿಯ ಕೊರತೆ, ಅನಾರೋಗ್ಯ, ಪಾಶ್ಚಾತ್ಯ ಸಂಸ್ಕೃತಿ, ಸಾಹಸ ಪ್ರವೃತ್ತಿ, ನಕಾರಾತ್ಮಕ ಚಿಂತನೆಗಳು, ಈ ಎಲ್ಲಾ ಕಾರಣಗಳಿಂದಾಗಿ ಅಮಲು ಪದಾರ್ಥ ಹಾಗೂ ಇನ್ನಿತರ ವ್ಯಸನಗಳಿಗೆ ಬಲಿಯಾಗುವ ಸಾಧ್ಯತೆಗಳಿವೆ. ಸಮಾಜದಲ್ಲಿ ವ್ಯಸನಕ್ಕೆ ಬಲಿ ಬಿದ್ದವರಿಗೆ ಅಪಘಾತ, ಆತ್ಮಹತ್ಯೆ ಮತ್ತು ಅಕಾಲಿಕ ಮರಣ ಇವುಗಳು ಸರ್ವೇ ಸಾಮಾನ್ಯ.
ಇವುಗಳಿಂದ ಹೊರಬರಲು ವಿದ್ಯಾರ್ಥಿಗಳಾದ ನಾವು ತಮ್ಮ ಜೀವನದಲ್ಲಿ ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ. ದೃಢ ನಿರ್ಧಾರ, ಸಂಧಾನ ಕೌಶಲ, ರಚನಾತ್ಮಕ ಚಿಂತನೆ, ವಿಮರ್ಶಾತ್ಮಕ ಚಿಂತನೆ, ಸಂವಹನ ಕುಶಲತೆ ವ್ಯಕ್ತಿ – ವ್ಯಕ್ತಿ ಸಂಬಂಧ, ಸಮಯ ಪಾಲನೆ, ನಡತೆ, ಗೌರವ, ಆತ್ಮಸ್ಥೈರ್ಯ, ಸಮಸ್ಯಾ ಪರಿಹಾರ, ಪರಾನುಭೂತಿ, ದೃಢ ನಿಲುವು, ಭಾವ ನಿಯಂತ್ರಣ, ಧನಾತ್ಮಕ ಚಿಂತನೆ, ಕರ್ತವ್ಯ ಪ್ರಜ್ಞೆ, ಮತ್ತು ಪ್ರೀತಿ ವಿಶ್ವಾಸಗಳಿಂದ ಮಾತ್ರ ವ್ಯಸನ ಮುಕ್ತ ಜೀವನವನ್ನು ನಡೆಸಲು ಸಾಧ್ಯ.
ಆರೋಗ್ಯವಂತ ಶರೀರವೇ ಆತ್ಮದ ಅರಮನೆ. ಅನಾರೋಗ್ಯವಂತ ಶರೀರವೇ ಆತ್ಮದ ಸೆರೆಮನೆ. ಆರೋಗ್ಯಪೂರ್ಣ ವ್ಯಕ್ತಿಗಳನ್ನು ಸಮಾಜಕ್ಕೆ ಕೊಡುವಲ್ಲಿ ನಮ್ಮೆಲ್ಲರ ಪಾತ್ರವಿದೆ. ಬಹುತೇಕ ಯುವಜನತೆ ಬಾಹ್ಯ ವ್ಯಕ್ತಿಗಳ ಪ್ರಭಾವದಿಂದ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಇದನ್ನು ತಡೆಗಟ್ಟಲು ಸಂಕಲ್ಪ ಮಾಡೋಣ ಎಂದು ಪ್ರತಿಜ್ಞಾ ವಿಧಿ ಭೋದಿಸಿದರು.
ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಸವ ಲಿಂಗಪ್ಪ ಇವರು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ಮಾತುಗಳೊಂದಿಗೆ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಸಂಸ್ಥೆಯ ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು 150 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶ್ರೀಮತಿ ವಿದ್ಯಾ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ತಣ್ಣೀರುಪಂತ ವಲಯ ಇವರು ಸ್ವಾಗತಿಸಿ, ಶ್ರೀ ಜಯಪ್ರಕಾಶ್ ಶಾಲಾ ಶಿಕ್ಷಕರು ಇವರು ನಿರೂಪಿಸಿ, ಶ್ರೀಮತಿ ಸಂಧ್ಯಾ ಸೇವಾಪ್ರತಿನಿಧಿ ಕರಾಯ – ಕುಪ್ಪೆಟ್ಟಿ ಇವರು ವಂದಿಸಿದರು.