ವಿಶೇಷ ಮದ್ಯವರ್ಜನ ಶಿಬಿರಕ್ಕೆ ಪೂಜ್ಯರ ಭೇಟಿ

Janajagurthi Vedike

ಬೆಳ್ತಂಗಡಿ: ಮದ್ಯಪಾನವೆಂಬ ಚಟವು ವ್ಯಕ್ತಿಯ ದೈಹಿಕ, ಮಾನಸಿಕ, ಕೌಟುಂಬಿಕ ಹಾಗೂ ಸಾಮಾಜಿಕ ಜೀವನದ ಮೇಲೆ ತೀವ್ರ ಪರಿಣಾಮ ಬೀರುವ ಸಮಸ್ಯೆಯಾಗಿದೆ. ಮನುಷ್ಯ ಕೆಟ್ಟವನಲ್ಲ, ಆದರೆ ಆತನ ಕೆಟ್ಟ ಅಭ್ಯಾಸಗಳು ಆತನ ಜೀವನವನ್ನು ಸಂಕಷ್ಟಕ್ಕೆ ದೂಡುತ್ತವೆ. ಆದ್ದರಿಂದ ದುಶ್ಚಟಗಳಿಂದ ದೂರವಿದ್ದು, ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ರೂಪಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 281ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಆಗಮಿಸಿದ ಅವರು, 67 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಮದ್ಯಪಾನದ ಚಟದಿಂದ ಹೊರಬರಲು ದೃಢಸಂಕಲ್ಪ ಮತ್ತು ಆತ್ಮವಿಶ್ವಾಸ ಅತ್ಯಗತ್ಯ. ಯೋಗ, ಧ್ಯಾನ, ವ್ಯಾಯಾಮ, ಸಕಾರಾತ್ಮಕ ಚಿಂತನೆ, ಪುಸ್ತಕ ಓದುವಿಕೆ, ಚಿತ್ರಕಲೆ ಹಾಗೂ ಕ್ರೀಡೆಗಳಂತಹ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸನ್ನು ದುಶ್ಚಟಗಳಿಂದ ದೂರವಿಡಲು ಸಾಧ್ಯವಾಗುತ್ತದೆ. ಜೀವನದಲ್ಲಿ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನದ ಜೊತೆಗೆ ಕುಟುಂಬದಲ್ಲಿಯೂ ನೆಮ್ಮದಿ ಮತ್ತು ಸಂತೋಷವನ್ನು ಕಾಣಬಹುದು ಎಂದು ಅವರು ಮಾರ್ಗದರ್ಶನ ನೀಡಿದರು.ಮದ್ಯವರ್ಜನ ಶಿಬಿರಗಳು ಕೇವಲ ಮದ್ಯಪಾನದಿಂದ ದೂರವಿರುವಂತೆ ತಿಳಿಸುವ ಕಾರ್ಯಕ್ರಮಗಳಲ್ಲ; ಶಿಬಿರಾರ್ಥಿಗಳ ಮನಪರಿವರ್ತನೆ ಮಾಡಿ, ಜೀವನದ ಬಗ್ಗೆ ಹೊಸ ಭರವಸೆ ಮೂಡಿಸುವ ಹಾಗೂ ಕುಟುಂಬ ಮತ್ತು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಪ್ರೇರಣೆ ನೀಡುವ ಮಹತ್ವದ ವೇದಿಕೆಗಳಾಗಿವೆ. ಶಿಬಿರಾರ್ಥಿಗಳು ಶಿಬಿರದಲ್ಲಿ ದೊರೆಯುವ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು, ದುಶ್ಚಟಗಳಿಂದ ಸಂಪೂರ್ಣವಾಗಿ ಮುಕ್ತರಾಗಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಶ್ರೀ ಕೃಷ್ಣ ಸ್ವಾಮಿ, ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯಸ್, ಕೇಂದ್ರ ಕಚೇರಿಯ ಮಾಧ್ಯಮ ವಿಭಾಗದ ನಿರ್ದೇಶಕರಾದ ಪ್ರದೀಪ್, ಯೋಜನಾಧಿಕಾರಿ ಅಜಿತ್, ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ಜಯಾನಂದ, ಕುಮಾರ್, ಆರೋಗ್ಯ ಸಹಾಯಕಿ ಜಯಲಕ್ಷ್ಮಿ, ಆಪ್ತಸಮಾಲೋಚಕ ಜಿ. ಆರ್. ಮಧು ಹಾಗೂ ಜಾಗೃತಿ ಸೌಧದ ಪ್ರಬಂಧಕ ಕಿಶೋರ್ ಉಪಸ್ಥಿತರಿದ್ದರು.