ಗುರುವಾಯನಕೆರೆ : ಮದ್ಯವರ್ಜನ ಶಿಬಿರವು ಬಹಳಷ್ಟು ವಿರೋಧಗಳ ನಡುವೆಯೂ ಯಶಸ್ವಿಯಾಗಿ ಇಂದು ನಡೆದುಕೊಂಡು ಬಂದಿದೆ. ಅಂದು ಪೂಜ್ಯರು ಕಂಡ ಕನಸನ್ನು ಅವರು ನನಸು ಮಾಡದೇ ಇರುತ್ತಿದ್ದರೆ ಇಂದು ಲಕ್ಷಾಂತರ ಮಂದಿ ನವಜೀವನ ಆರಂಭಿಸಲು ಸಾಧ್ಯವಾಗುತ್ತಿರಲಿಲ್ಲ.ಅವರ ಅದ್ಭುತ ಕಲ್ಪನೆಯ ಫಲವಾಗಿ ಇಂದು ಲಕ್ಷಾಂತರ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿವೆ, ಸಮಿತಿಯವರಿಗೆ ಬ್ರಹ್ಮಕಲಶ ನೆರವೇರಿಸಿದಷ್ಟು ಪುಣ್ಯದ ಫಲ ಲಭಿಸಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಬಿಸಿ. ಟ್ರಸ್ಟ್ ಗುರುವಾಯನಕೆರೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಗರ್ಡಾಡಿ-ಗುರುವಾಯನಕೆರೆ ಆಶ್ರಯದಲ್ಲಿ ಪಡಂಗಡಿಯ ಸಮೃದ್ಧಿ ಸಭಾಭವನದಲ್ಲಿ ನಡೆಯುತ್ತಿದ್ದ 2102ನೇ ಮದ್ಯವರ್ಜನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಶ್ರೀ ಕ್ಷೇತ್ರ ಧ.ಗ್ರಾ.ಯೋ. (ರಿ.) ಧರ್ಮಸ್ಥಳ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಅವರು ಮಾತನಾಡಿ, ಶಿಬಿರಾರ್ಥಿಗಳು ಪರಿವರ್ತನೆ ಆಗಿ ಸಮಾಜಕ್ಕೆ ಬೆಳಗಾಗಿ ಬಾಳಬೇಕು. ನಿಮ್ಮ ಬದುಕು ಬೆಳಕಾದಾಗ ನಾವು ಆಯೋಜಿಸುವ ಶಿಬಿರಗಳಿಗೆ ಸಾರ್ಥಕತೆ ಬರುತ್ತದೆ ಎಂದರು.ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ ಪಾಯಸ್ ರವರು ಕುಟುಂಬ ದಿನ ಕಾರ್ಯಕ್ರಮವನ್ನು ನೆರವೇರಿಸಿದರು.ನ್ಯಾಯವಾದಿ ಸಹನಾ ಕುಂದರ್ ಮಾತನಾಡಿ, ಮದ್ಯವ್ಯಸನಿಗಳ ಕುಟುಂಬದ ಕಣ್ಣೀರು ಒರೆಸುವ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆಗುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕುವ ಅವಕಾಶ ನೀಡಿದೆ ಎಂದರು. ವಯುಕ್ತಿಕವಾಗಿ ನನ್ನ ಸಾರ್ಥಕತೆಯ ಬದುಕನ್ನು ಪೂಜ್ಯ ಖಾವಂದರು ಹಾಗೂ ಮಾತೃಶ್ರೀಯವರಿಗೆ ಅರ್ಪಿಸುವುದಾಗಿ ಅವರು ಭಾವನಾತ್ಮಕವಾಗಿ ನುಡಿದರು.ಕರಾವಳಿಯಲ್ಲಿನ ಉತ್ತರಕ್ರಿಯೆಯ ಸಂಪ್ರದಾಯದಲ್ಲಿ ೧೬ನೇ ದಿನ ಮದ್ಯ ಇಟ್ಟು ಒಳಗೆ ಕರೆಯುವ ಕಟ್ಟುಪಾಡು ನಿಲ್ಲಬೇಕು. ಅದು ನಿಜವಾಗಿಯೂ ಬಹುದೊಡ್ಡ ಶಾಪ ಎಂದರು.ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್, ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್‌ಸಿಂಹ ನಾಯಕ್, ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.ಪ್ರಾ ಕೃ.ಪ.ಸ. ಸಂಘದ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ದ.ಕ. ಅಧ್ಯಕ್ಷ ಪ್ರಕಾಶ್ ಕಾರಂತ, ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ, ಉದ್ಯಮಿ ಶಶಿಕಾಂತ್ ಬಿ. ನಾಯಕ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಗಿರೀಶ್ ಕೆ.ಎಸ್., ಯೋಗ ಶಿಕ್ಷಕಿ ಡಾ. ದ್ವಿತಿ, ಜನಜಾಗೃತಿ ವೇದಿಕೆ ವಲಯಧ್ಯಕ್ಷ ಹರೀಶ್ ಕೋಟ್ಯಾನ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಶಿಬಿರಾರ್ಥಿಗಳ ಪರವಾಗಿ ಸುರೇಂದ್ರ ಹಾಗೂ ಗಣೇಶ್ ಅನಿಸಿಕೆ ವ್ಯಕ್ತಪಡಿಸಿದರು.ಆಟೋಟಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಯೋಜನಾಧಿಕಾರಿ ಹರೀಶ್ ಆರ್.ಎಸ್. ಸ್ವಾಗತಿಸಿದರು, ಜನಜಾಗೃತಿ ಯೋಜನಾಧಿಕಾರಿ ಶ್ರೀ ಗಣೇಶ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು,ವಲಯ ಮೇಲ್ವಿಚಾರಕಿ ಯಶೋಧ ವಂದಿಸಿದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಮತ್ತು ನವಜೀವನ ಸಮಿತಿ ಗುರುವಾಯನಕೆರೆ, ಪಡಂಗಡಿ ಪ್ರಾ.ಕೃ.ಪ.ಸ. ಸಂಘ, ಸ್ಥಳೀಯ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಶ್ರೀ ಧ.ಮಂ. ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಲ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ೨೧೦೨ನೇ ಮದ್ಯವರ್ಜನ ಶಿಬಿರವು ಯಶಸ್ವಿಯಾಗಿ ನಡೆದು ಸಂಪನ್ನಗೊಂಡಿತು.
