ಸರಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗೆ ” ಸ್ವಾಸ್ಥ್ಯ ಸಂಕಲ್ಪ ” ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಾರ್ಕಳ ತಾಲೂಕು, ತಾಲೂಕು ಜನಜಾಗೃತಿ ವೇದಿಕೆ ಕಾರ್ಕಳ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕುಕ್ಕುಂದೂರು ವಲಯ, ಜನಜಾಗೃತಿ ವೇದಿಕೆ ಕುಕ್ಕುಂದೂರು ವಲಯ ಮತ್ತು ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಕಾರ್ಕಳ ಇವರುಗಳು ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ರಾಜರ್ಷಿ ಡಾll ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾll ಹೇಮಾವತಿ ವಿ.ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ವಿದ್ಯಾರ್ಥಿಗಳಿಗೆ ” ಸ್ವಾಸ್ಥ್ಯ ಸಂಕಲ್ಪ ” ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀ ಕಮಲಾಕ್ಷ ನಾಯಕ್ ನಿಕಟಪೂರ್ವ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಉಡುಪಿ ಇವರು ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉದ್ಘಾಟನಾ ಮಾತುಗಳನ್ನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ಶ್ರೀ ನಂದಕುಮಾರ್ ಪಿ ಪಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಇದುವರೆಗೆ ಕರ್ನಾಟಕ ರಾಜ್ಯದ 8650 ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮವನ್ನು ನಡೆಸಿ 15 ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡಿರುತ್ತಾರೆ. ಮಾದಕ ವ್ಯಸನವೆಂಬುದೊಂದು ರೋಗ. ವಿಶ್ವ ಆರೋಗ್ಯ ಸಂಸ್ಥೆಯ ಕಳೆದ ಸಂಶೋಧನೆಯ ಪ್ರಕಾರ ನಮ್ಮ ಭಾರತ ದೇಶದಲ್ಲಿ ಒಂದು ವರ್ಷಕ್ಕೆ 5 ಲಕ್ಷ ಜನರು ಮದ್ಯಪಾನದಿಂದ ಮರಣ ಹೊಂದಿದರೆ 14.5 ಲಕ್ಷ ಜನರು ಮಾದಕ ದ್ರವ್ಯ, ಮಾದಕ ವ್ಯಸನ ಅಥವಾ ಇನ್ನಿತರ ಚಟಗಳಿಂದ ಬಲಿಯಾಗುತ್ತಿರುವುದು ಶೋಚನೀಯವಾಗಿದೆ. ಪ್ರಪಂಚದ ಐದು ಭೀಕರವಾದ ಖಾಯಿಲೆಗಳಲ್ಲಿ ಮಾದಕ ವ್ಯಸನವೂ ಒಂದು ( ಉದಾ : ಕ್ಯಾನ್ಸರ್, ಕ್ಷಯ, ಹೆಚ್.ಐ.ವಿ, ಹೃದಯ ಸಂಬಂಧಿತ ಖಾಯಿಲೆಗಳು, ಮತ್ತು ಮಾದಕ ವ್ಯಸನ ) ವಿದ್ಯಾರ್ಥಿಗಳ ವಯಸ್ಸು ಹದಿಹರೆಯದ ವಯಸ್ಸು. ಹದಿಹರೆಯದಲ್ಲಿನ ಒತ್ತಡಗಳು, ತಂದೆ – ತಾಯಂದಿರ ಒತ್ತಡ, ಸ್ನೇಹಿತರ ಒತ್ತಡ, ಜೀವನ ಶೈಲಿ, ಮಾಧ್ಯಮ, ಆರ್ಥಿಕ ಸ್ವಾತಂತ್ರ್ಯ, ಪ್ರೀತಿಯ ಕೊರತೆ, ಅನಾರೋಗ್ಯ, ಪಾಶ್ಚಾತ್ಯ ಸಂಸ್ಕೃತಿ, ಸಾಹಸ ಪ್ರವೃತ್ತಿ, ನಕಾರಾತ್ಮಕ ಚಿಂತನೆಗಳು, ಈ ಎಲ್ಲಾ ಕಾರಣಗಳಿಂದಾಗಿ ಅಮಲು ಪದಾರ್ಥ ಹಾಗೂ ಇನ್ನಿತರ ವ್ಯಸನಗಳಿಗೆ ಬಲಿಯಾಗುವ ಸಾಧ್ಯತೆಗಳಿವೆ. ಸಪ್ತ ವ್ಯಸನಗಳಲ್ಲಿ ಮಾದಕ ವ್ಯಸನ ಮೊದಲ ಮೆಟ್ಟಿಲು ಈ ಮೆಟ್ಟಿಲನ್ನು ಜಾರಿದರೆ ಉಳಿದೆಲ್ಲಾ ಮೆಟ್ಟಿಲುಗಳು ತನ್ನಿಷ್ಟಕ್ಕೆ ಜಾರುತ್ತವೆ. ( ಮಾದಕ ವ್ಯಸನ, ಮಾಂಸ, ಮಾನಿನಿ, ಜೂಜುಜುಗಾರಿ, ಮೃಗವಿಹಾರ, ದಿವಾಸ್ವಪ್ನ ಮತ್ತು ದಿವಾಮೈಥುನ ) ಸಮಾಜದಲ್ಲಿ ವ್ಯಸನಕ್ಕೆ ಬಲಿ ಬಿದ್ದವರಿಗೆ ಅಪಘಾತ, ಆತ್ಮಹತ್ಯೆ ಮತ್ತು ಅಕಾಲಿಕ ಮರಣ ಇವುಗಳು ಸರ್ವೇ ಸಾಮಾನ್ಯ. ಇವುಗಳಿಂದ ಹೊರಬರಲು ವಿದ್ಯಾರ್ಥಿಗಳಾದ ನಾವು ತಮ್ಮ ಜೀವನದಲ್ಲಿ ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ. ದೃಢ ನಿರ್ಧಾರ, ಸಂಧಾನ ಕೌಶಲ, ರಚನಾತ್ಮಕ ಚಿಂತನೆ, ವಿಮರ್ಶಾತ್ಮಕ ಚಿಂತನೆ, ಸಂವಹನ ಕುಶಲತೆ ವ್ಯಕ್ತಿ – ವ್ಯಕ್ತಿ ಸಂಬಂಧ, ಸಮಯ ಪಾಲನೆ, ನಡತೆ, ಗೌರವ, ಆತ್ಮಸ್ಥೈರ್ಯ, ಸಮಸ್ಯಾ ಪರಿಹಾರ, ಪರಾನುಭೂತಿ, ದೃಢ ನಿಲುವು, ಭಾವ ನಿಯಂತ್ರಣ, ಧನಾತ್ಮಕ ಚಿಂತನೆ, ಕರ್ತವ್ಯ ಪ್ರಜ್ಞೆ, ಮತ್ತು ಪ್ರೀತಿ ವಿಶ್ವಾಸಗಳಿಂದ ಮಾತ್ರ ವ್ಯಸನ ಮುಕ್ತ ಜೀವನವನ್ನು ನಡೆಸಲು ಸಾಧ್ಯ. ಆರೋಗ್ಯವಂತ ಶರೀರವೇ ಆತ್ಮದ ಅರಮನೆ. ಅನಾರೋಗ್ಯವಂತ ಶರೀರವೇ ಆತ್ಮದ ಸೆರೆಮನೆ. ಆರೋಗ್ಯಪೂರ್ಣ ವ್ಯಕ್ತಿಗಳನ್ನು ಸಮಾಜಕ್ಕೆ ಕೊಡುವಲ್ಲಿ ನಮ್ಮೆಲ್ಲರ ಪಾತ್ರವಿದೆ. ಬಹುತೇಕ ಯುವಜನತೆ ಬಾಹ್ಯ ವ್ಯಕ್ತಿಗಳ ಪ್ರಭಾವದಿಂದ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಇದನ್ನು ತಡೆಗಟ್ಟಲು ಸಂಕಲ್ಪ ಮಾಡೋಣ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚೇತನ್ ಟಿ.ಎಂ ಇವರು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಬೋಧಕರಾದ ಶ್ರೀ ಬಾಲಚಂದ್ರ ಹೆಬ್ಬಾರ್, ಶ್ರೀ ಹರೀಶ್ ಮತ್ತು ಮೇಲ್ವಿಚಾರಕರಾದ ಶ್ರೀ ಪ್ರಸಾದ್ ಕುಮಾರ್ ಇವರುಗಳು ಉಪಸ್ಥಿತರಿದ್ದರು. ಸೇವಾಪ್ರತಿನಿಧಿಗಳಾದ ಶ್ರೀಮತಿ ನಳಿನಾಕ್ಷಿ ಶ್ರೀಮತಿ ಆಶಾ, ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿ ವರ್ಗ, ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು 250 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶ್ರೀ ಪ್ರಸಾದ್ ಕುಮಾರ್ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕುಕ್ಕುಂದೂರು ವಲಯ ಇವರು ನಿರೂಪಿಸಿ, ಸಂಸ್ಥೆಯ ಉಪನ್ಯಾಸಕ ವೃಂದದವರು ಸ್ವಾಗತಿಸಿ, ವಂದಿಸಿದರು.