ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಶ್ರೀರಾಮ ವಿದ್ಯಾ ಸಂಸ್ಥೆ ಪಟ್ಟೂರು, ಶ್ರೀ ವಿಷ್ಣುಮೂರ್ತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಟ್ಟೂರು, ಶ್ರೀರಾಮ ಪ್ರೌಢಶಾಲೆ ಪಟ್ಟೂರು, ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆ ಪಟ್ಟೂರು, ಮಾತೃಸಂಸ್ಥೆ : ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇವರುಗಳ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಸ್ವಸ್ಥ ಮತ್ತು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಈ ವಿಷಯದ ಕುರಿತಂತೆ ದುಶ್ಚಟ ದುರಭ್ಯಾಸದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸುವ ” ಸ್ವಾಸ್ಥ್ಯ ಸಂಕಲ್ಪ ” ಕಾರ್ಯಕ್ರಮ ನಡೆಯಿತು. ವಿದ್ಯಾಸಂಸ್ಥೆಯ ಸಂಚಾಲಕರಾದ ಶ್ರೀ ಪ್ರಶಾಂತ್ ಶೆಟ್ಟಿ ದೇರಾಜೆ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕೊಕ್ಕಡ ವಲಯದ ಜನಜಾಗೃತಿ ವೇದಿಕೆ ವಲಯಾಧ್ಯಕ್ಷರಾದ ಶ್ರೀ ಶೇಷಪ್ಪ ಮೂಲ್ಯ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ಶ್ರೀ ನಂದಕುಮಾರ್ ಪಿ. ಪಿ. ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಇದುವರೆಗೆ ಕರ್ನಾಟಕ ರಾಜ್ಯದ 17,848 ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮವನ್ನು ನಡೆಸಿ 21 ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ ಮತ್ತು ಜನಜಾಗೃತಿ ವೇದಿಕೆಯ ಮುಖೇನ ಸಮುದಾಯದ ಸಹಭಾಗಿತ್ವದೊಂದಿಗೆ ಇದುವರೆಗೆ 1830 ಮದ್ಯವರ್ಜನ ಶಿಬಿರಗಳನ್ನು ನಡೆಸಿ 1 ಲಕ್ಷದ 46 ಸಾವಿರ ಮದ್ಯವ್ಯಸನಿಗಳನ್ನು ವ್ಯಸನಮುಕ್ತಗೊಳಿಸಲಾಗಿದೆ. ಮಾದಕ ವ್ಯಸನವೆಂಬುದೊಂದು ರೋಗ. ವಿಶ್ವ ಆರೋಗ್ಯ ಸಂಸ್ಥೆಯ ಕಳೆದ ಸಂಶೋಧನೆಯ ಪ್ರಕಾರ ನಮ್ಮ ಭಾರತ ದೇಶದಲ್ಲಿ ಒಂದು ವರ್ಷಕ್ಕೆ 5 ಲಕ್ಷ ಜನರು ಮದ್ಯಪಾನದಿಂದ ಮರಣ ಹೊಂದಿದರೆ 14.5 ಲಕ್ಷ ಜನರು ಮಾದಕ ದ್ರವ್ಯ, ಮಾದಕ ವ್ಯಸನ ಅಥವಾ ಇನ್ನಿತರ ಚಟಗಳಿಂದ ಬಲಿಯಾಗುತ್ತಿರುವುದು ಶೋಚನೀಯವಾಗಿದೆ. ಪ್ರಪಂಚದ ಐದು ಭೀಕರವಾದ ಖಾಯಿಲೆಗಳಲ್ಲಿ ಮಾದಕ ವ್ಯಸನವೂ ಒಂದು (ಉದಾ : ಕ್ಯಾನ್ಸರ್, ಕ್ಷಯ, ಹೆಚ್.ಐ.ವಿ, ಹೃದಯ ಸಂಬಂಧಿತ ಖಾಯಿಲೆಗಳು ಮತ್ತು ಮಾದಕ ವ್ಯಸನ) ವಿದ್ಯಾರ್ಥಿಗಳ ವಯಸ್ಸು ಹದಿಹರೆಯದ ವಯಸ್ಸು ವಿದ್ಯಾರ್ಥಿ ಜೀವನ ಹಸಿ ಮಣ್ಣಿನ ಮಡಿಕೆ ಇದ್ದ ಹಾಗೆ ಹೆಚ್ಚು ಸಡಿಲ ಮಾಡಿದರೂ ಹೆಚ್ಚು ಬಿಗಿ ಮಾಡಿದರೂ ಒಡೆಯುವುದು ಮಡಿಕೆಯೆ. ಹದಿಹರೆಯದಲ್ಲಿನ ಒತ್ತಡಗಳು, ತಂದೆ – ತಾಯಂದಿರ ಒತ್ತಡ, ಸ್ನೇಹಿತರ ಒತ್ತಡ, ಜೀವನ ಶೈಲಿ, ಮಾಧ್ಯಮ, ಆರ್ಥಿಕ ಸ್ವಾತಂತ್ರ್ಯ, ಪ್ರೀತಿಯ ಕೊರತೆ, ಅನಾರೋಗ್ಯ, ಪಾಶ್ಚಾತ್ಯ ಸಂಸ್ಕೃತಿ, ಸಾಹಸ ಪ್ರವೃತ್ತಿ, ನಕಾರಾತ್ಮಕ ಚಿಂತನೆಗಳು ಈ ಎಲ್ಲಾ ಕಾರಣಗಳಿಂದಾಗಿ ಅಮಲು ಪದಾರ್ಥ ಹಾಗೂ ಇನ್ನಿತರ ವ್ಯಸನಗಳಿಗೆ ಬಲಿಯಾಗುವ ಸಾಧ್ಯತೆಗಳಿವೆ. ಸಪ್ತ ವ್ಯಸನಗಳಲ್ಲಿ ಮಾದಕ ವ್ಯಸನ ಮೊದಲ ಮೆಟ್ಟಿಲು ಈ ಮೆಟ್ಟಿಲನ್ನು ಜಾರಿದರೆ ಉಳಿದೆಲ್ಲಾ ಮೆಟ್ಟಿಲುಗಳು ತನ್ನಿಷ್ಟಕ್ಕೆ ಜಾರುತ್ತವೆ(ಮಾದಕ ವ್ಯಸನ, ಮಾಂಸ, ಮಾನಿನಿ, ಜೂಜುಜುಗಾರಿ, ಮೃಗವಿಹಾರ, ದಿವಾಸ್ವಪ್ನ ಮತ್ತು ದಿವಾಮೈಥುನ) ಸಮಾಜದಲ್ಲಿ ವ್ಯಸನಕ್ಕೆ ಬಲಿ ಬಿದ್ದವರಿಗೆ ಅಪಘಾತ, ಆತ್ಮಹತ್ಯೆ ಮತ್ತು ಅಕಾಲಿಕ ಮರಣ ಇವುಗಳು ಸರ್ವೇ ಸಾಮಾನ್ಯ. ಅತಿಯಾದ ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣದಿಂದಲೂ ವಿದ್ಯಾರ್ಥಿಗಳ ಮನೋಸ್ಥಿತಿ ಹಾಳಾಗುತ್ತದೆ. ವಿದ್ಯಾರ್ಥಿಗಳು ಇದರ ಬಗ್ಗೆಯೂ ಗಮನ ಹರಿಸಬೇಕು. ಇವುಗಳಿಂದ ಹೊರಬರಲು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ. ದೃಢ ನಿರ್ಧಾರ, ಸಂಧಾನ ಕೌಶಲ, ರಚನಾತ್ಮಕ ಚಿಂತನೆ, ವಿಮರ್ಶಾತ್ಮಕ ಚಿಂತನೆ, ಸಂವಹನ ಕುಶಲತೆ, ವ್ಯಕ್ತಿ – ವ್ಯಕ್ತಿ ಸಂಬಂಧ, ಸಮಯ ಪಾಲನೆ, ನಡತೆ, ಗೌರವ, ಆತ್ಮಸ್ಥೈರ್ಯ, ಸಮಸ್ಯಾ ಪರಿಹಾರ, ಪರಾನುಭೂತಿ, ದೃಢ ನಿಲುವು, ಭಾವ ನಿಯಂತ್ರಣ, ಧನಾತ್ಮಕ ಚಿಂತನೆ, ಮಾನವೀಯ ಮೌಲ್ಯ, ಕರ್ತವ್ಯ ಪ್ರಜ್ಞೆ ಮತ್ತು ಪ್ರೀತಿ ವಿಶ್ವಾಸಗಳಿಂದ ಮಾತ್ರ ವ್ಯಸನ ಮುಕ್ತ ಜೀವನವನ್ನು ನಡೆಸಲು ಸಾಧ್ಯ. ಆರೋಗ್ಯವಂತ ಶರೀರವೇ ಆತ್ಮದ ಅರಮನೆ ಅನಾರೋಗ್ಯವಂತ ಶರೀರವೇ ಆತ್ಮದ ಸೆರೆಮನೆ. ಆರೋಗ್ಯ ಪೂರ್ಣ ಸಮಾಜ ಅಥವಾ ದುಶ್ಚಟಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ. ಬಹುತೇಕ ಯುವಜನತೆ ಬಾಹ್ಯ ವ್ಯಕ್ತಿಗಳ ಪ್ರಭಾವದಿಂದ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಇದನ್ನು ತಡೆಗಟ್ಟಲು ಸಂಕಲ್ಪ ಮಾಡೋಣ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಚಂದ್ರಶೇಖರ್ ಶೇಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಕೊಕ್ಕಡ ವಲಯದ ಮೇಲ್ವಿಚಾರಕರಾದ ಶ್ರೀಮತಿ ಭಾಗೀರಥಿ, ಪಟ್ರಮೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀ ಸದಾಶಿವ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. 200 ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.
