ಕಲಬುರಗಿ ಪ್ರಾದೇಶಿಕ ವಿಭಾಗದ ಯಾದಗಿರಿ ಜಿಲ್ಲಾ ಜನಜಾಗೃತಿ ವೇದಿಕೆಯ ಮಹತ್ವದ ಸಭೆ ಇತ್ತೀಚೆಗೆ ನಡೆಯಿತು. ಶ್ರೀ ನಾಗರತ್ನ ಅನುಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಶ್ರೀ ವಿವೇಕ್ ವಿ. ಪಾಯಸ್, ಜನಜಾಗೃತಿ ಪ್ರಾದೇಶಿಕ ನಿರ್ದೇಶಕರು, ಶ್ರೀ ದಿನೇಶ್ ಪೂಜಾರಿ, ಕಲಬುರಗಿ ಪ್ರಾದೇಶಿಕ ನಿರ್ದೇಶಕರು ಹಾಗೂ ಶ್ರೀ ವಸಂತಗೌಡ, ಯಾದಗಿರಿ ಜಿಲ್ಲಾ ನಿರ್ದೇಶಕರು ಉದ್ಘಾಟಿಸಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಉಪಾಧ್ಯಕ್ಷರು, ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು, ಜನಜಾಗೃತಿ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಗ್ರಾಮಮಟ್ಟಕ್ಕೆ ತಲುಪಿಸುವ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.ಸಭೆಯ ಪ್ರಮುಖ ಚರ್ಚಾ ವಿಷಯಗಳಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರ ಅಧ್ಯಕ್ಷರ ಬದಲಾವಣೆ, ಗಾಂಧಿ ಜಯಂತಿ ಕಾರ್ಯಕ್ರಮದ ಆಯೋಜನೆ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸುವಿಕೆ, ಮದ್ಯವರ್ಜನ ಶಿಬಿರಗಳ ರೂಪುರೇಷೆ ಹಾಗೂ ಜನಜಾಗೃತಿ ಕಾರ್ಯಕ್ರಮಗಳಲ್ಲಿ ಸದಸ್ಯರು ಗಮನಿಸಬೇಕಾದ ಅಂಶಗಳು ಸೇರಿದ್ದವು. ಜೊತೆಗೆ ನವಜೀವನ ಸದಸ್ಯರ ಅನುಪಾಲನೆ, ಅವರ ಪ್ರಗತಿ ಪರಿಶೀಲನೆ ಹಾಗೂ ನಿರಂತರ ಮಾರ್ಗದರ್ಶನದ ಅಗತ್ಯತೆಯ ಬಗ್ಗೆಯೂ ವಿಶೇಷವಾಗಿ ಚರ್ಚಿಸಲಾಯಿತು.ಕಲಬುರಗಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರು ವಿವಿಧ ಯೋಜನೆಗಳು ಮತ್ತು ಮುಂದಿನ ಕಾರ್ಯಕ್ರಮಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು. ಜೇವರ್ಗಿ ತಾಲೂಕಿನಲ್ಲಿ ಆಯೋಜಿಸಬೇಕಿರುವ ಮದ್ಯವರ್ಜನ ಶಿಬಿರದ ಉದ್ದೇಶ, ಕಾರ್ಯಪದ್ಧತಿ ಹಾಗೂ ಜನಸಹಭಾಗಿತ್ವದ ಕುರಿತು ಮಾರ್ಗದರ್ಶನ ನೀಡಲಾಯಿತು. ಮದ್ಯಪಾನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಇಂತಹ ಶಿಬಿರಗಳನ್ನು ಪರಿಣಾಮಕಾರಿಯಾಗಿ ಆಯೋಜಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಲಾಯಿತು.ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು. ಆರೋಗ್ಯಕರ ಜೀವನಶೈಲಿ, ಸ್ವಚ್ಛತೆ, ಕುಟುಂಬದ ಆರೋಗ್ಯ ಕಾಳಜಿ ಹಾಗೂ ಸಮಾಜದಲ್ಲಿ ಉತ್ತಮ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಲಾಯಿತು.ಯಾದಗಿರಿ ಜಿಲ್ಲಾ ನಿರ್ದೇಶಕರು ಸಭೆಗೆ ಆಗಮಿಸಿದ ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ಪ್ರಾದೇಶಿಕ ನಿರ್ದೇಶಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಗತ ಸಭೆಯ ವರದಿಯನ್ನು ಮಂಡಿಸಿ, ಜಿಲ್ಲೆಯಲ್ಲಿ ಈಗಾಗಲೇ ನಡೆದ ವಿವಿಧ ಜನಜಾಗೃತಿ ಕಾರ್ಯಕ್ರಮಗಳು, ಶಿಬಿರಗಳು ಹಾಗೂ ಸಾಮಾಜಿಕ ಚಟುವಟಿಕೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು.
ಸಭೆಯ ಅಂತ್ಯದಲ್ಲಿ ಎಲ್ಲ ತಾಲೂಕುಗಳ ಪದಾಧಿಕಾರಿಗಳು ಮತ್ತು ಸದಸ್ಯರು ಪರಸ್ಪರ ಸಹಕಾರದೊಂದಿಗೆ ಜನಜಾಗೃತಿ, ಆರೋಗ್ಯ, ಮದ್ಯವರ್ಜನೆ ಹಾಗೂ ನವಜೀವನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಸಂಕಲ್ಪ ವ್ಯಕ್ತಪಡಿಸಿದರು.
