ಬೆಂಗಳೂರು ದಕ್ಷಿಣ ಜಿಲ್ಲಾ ಜನಜಾಗೃತಿ ವೇದಿಕೆಯ 2026-27ನೇ ಸಾಲಿನ ದ್ವಿತೀಯ ತ್ರೈಮಾಸಿಕ ಸಭೆ

Janajagurthi Vedike

ಬೆಂಗಳೂರು ದಕ್ಷಿಣ: ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಬೆಂಗಳೂರು ದಕ್ಷಿಣ ಜಿಲ್ಲಾ ಜನಜಾಗೃತಿ ವೇದಿಕೆಯ 2026-27ನೇ ಸಾಲಿನ ದ್ವಿತೀಯ ತ್ರೈಮಾಸಿಕದ ಸಭೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಉಪಧ್ಯಕ್ಷರಾದ ಮಾನ್ಯ ಶ್ರೀ ಮಾರಣ್ಣನವರ ಅಧ್ಯಕ್ಷತೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿಯವರಾದ ಮಾನ್ಯ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ಸರ್ ರವರ ಉಪಸ್ಥಿತಿಯಲ್ಲಿ ನಡೆಸಲಾಯಿತು.
ಜಿಲ್ಲಾ ವೇದಿಕೆ ಕಾರ್ಯದರ್ಶಿಯವರಾದ ಶ್ರೀ ಜಯಕರ್ ಶೆಟ್ಟಿ ಸರ್ ರವರು ಸರ್ವರನ್ನು ಸ್ವಾಗತಿಸುವುದರ ಮೂಲಕ ಜಿಲ್ಲೆಯ ಪ್ರಗತಿಯ ವರದಿಯನ್ನು ಮಂಡಿಸಿದರು.ಮಾನ್ಯ ರಾಜ್ಯ ಕಾರ್ಯದರ್ಶಿಯವರು ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಹಾಗೂ ಸದಸ್ಯರ ಸೇವೆಯನ್ನು ಶ್ಲಾಘಿಸಿದರು. ಪೂಜ್ಯರ ಮಾರ್ಗದರ್ಶನದಲ್ಲಿ ಜನಜಾಗೃತಿ ವೇದಿಕೆಯ ಸಮಾಜಮುಖಿ ಚಟುವಟಿಕೆಗಳು, ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಪೂಜ್ಯರ ಕನಸು, ಕುಟುಂಬದ ಕಣ್ಣೀರನ್ನು ಒರೆಸುವ ಮದ್ಯವರ್ಜನ ಶಿಬಿರಗಳು, ನಶೆಮುಕ್ತ ಭಾರತದತ್ತ ನಮ್ಮೆಲ್ಲರ ನಡೆ ವಿಚಾರವಾಗಿ ಸಮಗ್ರವಾಗಿ ಮಾರ್ಗದರ್ಶನ ಮಾಡುತ್ತಾ, ಪೂಜ್ಯರ ಮಾರ್ಗದರ್ಶನದಲ್ಲಿ ಈ ವರ್ಷವೂ ಪ್ರತಿ ವರ್ಷದಂತೆ ಜನಜಾಗೃತಿ ವೇದಿಕೆಯ ಮೂಲಕ ರಾಜ್ಯಾದ್ಯಂತ ಗಾಂಧಿ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕವಸ್ತುಗಳ ಪೂರೈಕೆಯ ಹಾವಳಿಯು ದಟ್ಟವಾಗಿದ್ದು, ಇವುಗಳ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ತೊಡಗಿಸಿಕೊಂಡು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ನಡೆಸಬೇಕೆಂದು ಸಲಹೆ ನೀಡಿದರು.
ಅಕ್ಟೋಬರ್ 2 ರ ಕಾರ್ಯಕ್ರಮದ ಬಗ್ಗೆ ಸುಧೀರ್ಘ ಚರ್ಚೆ ನಡೆದು, ಅಕ್ಟೋಬರ್ 13ರಂದು ಕನಕಪುರ ತಾಲೂಕಿನಲ್ಲಿ ಕಾರ್ಯಕ್ರಮ ಆಯೋಜಿಸುವುದೆಂದು ನಿರ್ಧರಿಸಲಾಯಿತು. ಈ ಬಗ್ಗೆ ತುರ್ತಾಗಿ ಪೂರ್ವತಯಾರಿ ಸಭೆಯನ್ನು ಕರೆಯುವ ಬಗ್ಗೆಯೂ ನಿರ್ಧರಿಸಲಾಯಿತು.ಈ ಸಭೆಯಲ್ಲಿ ಸ್ಥಾಪಕಾಧ್ಯಕ್ಷರಾದ ಶ್ರೀ ಚಿಕ್ಕಣ್ಣಯ್ಯರವರು, ಕೋಶಾಧಿಕಾರಿಯವರಾದ ಶ್ರೀ ಚಂದ್ರರವರು, ವೇದಿಕೆಯ ಸದಸ್ಯರುಗಳು, ಕ್ಷೇತ್ರ ಯೋಜನಾಧಿಕಾರಿಗಳು, ಜನಜಾಗೃತಿ ವೇದಿಕೆ ಯೋಜನಾಧಿಕಾರಿಯವರು ಉಪಸ್ಥಿತರಿದ್ದರು.