ಹಾವೇರಿ: ಹಾವೇರಿ ಜಿಲ್ಲಾ ವ್ಯಾಪ್ತಿಯ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಜಿಲ್ಲಾ ಮಟ್ಟದ ದ್ವಿತೀಯ ತ್ರೈಮಾಸಿಕ ಸಭೆ ಇತ್ತೀಚೆಗೆ ನಡೆಯಿತು. ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ಅವರು ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರಸ್ತುತ ವರ್ಷ ಧಾರವಾಡ ಪ್ರಾದೇಶಿಕ ವ್ಯಾಪ್ತಿಗೆ ‘ಚಾಂಪಿಯನ್ ಆಫ್ ದಿ ಚಾಂಪಿಯನ್’ ಗೌರವ ದೊರೆತಿರುವುದಕ್ಕೆ ಅವರು ಜನಜಾಗೃತಿ ವೇದಿಕೆಯ ಎಲ್ಲ ಸದಸ್ಯರನ್ನು ಅಭಿನಂದಿಸಿದರು. ಜನಜಾಗೃತಿ ಕಾರ್ಯಕ್ರಮದ ಕ್ರಿಯಾಯೋಜನೆ, ನಿಗದಿತ ಗುರಿಗಳು ಹಾಗೂ ಸಾಧನೆಗಳ ಕುರಿತು ಸಮಗ್ರ ವಿಮರ್ಶೆ ನಡೆಸಿದ ಅವರು, ಸಮುದಾಯದ ಏಳಿಗೆಗಾಗಿ ಕ್ಷೇತ್ರ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಅಂಕಿ-ಅಂಶಗಳ ಸಹಿತ ಮಾಹಿತಿ ನೀಡಿದರು.
ಸಭೆಯಲ್ಲಿ ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳ ಯೋಜನಾಧಿಕಾರಿಗಳು ತಮ್ಮ ತಮ್ಮ ತಾಲೂಕುಗಳ ಗುರಿಸಾಧನೆ, ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ವಿವರಿಸಿದರು. ಕ್ರಿಯಾಯೋಜನೆಯಂತೆ ಬಾಕಿ ಉಳಿದಿರುವ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮವನ್ನು ಮುಂದಿನ ತಿಂಗಳ 15ರೊಳಗೆ ಪೂರ್ಣಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಗಾಂಧಿ ಜಯಂತಿ ಅಂಗವಾಗಿ ರಾಣೆಬೆನ್ನೂರು ತಾಲೂಕಿನಲ್ಲಿ ಸೆಪ್ಟೆಂಬರ್ 9, 2026ರಂದು ವಿಶೇಷ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು. ಗಾಂಧಿ ಜಯಂತಿ ಕಾರ್ಯಕ್ರಮಕ್ಕೂ ಮುನ್ನ ‘ನವ ಜೀವನೋತ್ಸವ’ ಕಾರ್ಯಕ್ರಮವನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಪ್ರಸಕ್ತ ವರ್ಷ ಆಯೋಜಿಸಲಾದ ಮಧ್ಯವರ್ಜನ ಶಿಬಿರಗಳ ಫಲಿತಾಂಶ, ಅದರ ಪರಿಣಾಮ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಶಿಬಿರಗಳನ್ನು ಆಯೋಜಿಸುವ ಕುರಿತು ಚರ್ಚೆ ನಡೆಯಿತು.
ಜಿಲ್ಲಾ ಮಟ್ಟದ ಪೋಷಕರ ಸಭೆ ಆಯೋಜನೆ, ನವಜೀವನ ಸಮಿತಿಗಳ ರಚನೆ ಹಾಗೂ ಸಮಿತಿಯ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸುವ ಕ್ರಮಗಳ ಕುರಿತು ಸಭೆಯಲ್ಲಿ ಸಮಾಲೋಚಿಸಲಾಯಿತು. ಜನಜಾಗೃತಿ ವೇದಿಕೆಯಲ್ಲಿ ಮಹಿಳಾ ಪದಾಧಿಕಾರಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಅವರನ್ನು ಆಯ್ಕೆ ಮಾಡುವ ಕುರಿತು ಸಹ ಚರ್ಚಿಸಲಾಯಿತು.
ಜನಜಾಗೃತಿ ವೇದಿಕೆಯ ಸದಸ್ಯರು ವೇದಿಕೆ ಮತ್ತು ಯೋಜನೆಯ ಬಲವರ್ಧನೆಗೆ ಪೂರಕವಾದ ಹಲವು ಸಲಹೆಗಳನ್ನು ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬಸವರಾಜ ಹುಲ್ಲತ್ತಿ ಅವರು, ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಸಿಗುವ ಪುಣ್ಯದ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ನಿರ್ದೇಶಕರಾದ ಅಶೋಕ್ ಅವರು ಸಭೆಯ ಯಶಸ್ಸಿಗಾಗಿ ಸಕ್ರಿಯವಾಗಿ ತೊಡಗಿಸಿಕೊಂಡು, ತಮ್ಮ ಪರಿಚಯದೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಜಿಲ್ಲಾ ಎಂ.ಎಸ್. ಯೋಜನಾಧಿಕಾರಿ ತೀರ್ಥ ಪ್ರಸಾದ್, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್, ಎಲ್ಲ ಕ್ಷೇತ್ರ ಯೋಜನಾಧಿಕಾರಿಗಳು ಹಾಗೂ ಜಿಲ್ಲಾ ಆಡಿಟ್ ಪ್ರಬಂಧಕರು ಉಪಸ್ಥಿತರಿದ್ದರು.
