ಕಾರ್ಕಳ ಪೆರ್ವಾಜೆಯಲ್ಲಿ 2123ನೇ ಮದ್ಯವರ್ಜನ ಶಿಬಿರ ಉದ್ಘಾಟನೆ

Janajagurthi Vedike

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪೇರ್ವಾಜೆ ಇವರ ಸಹಯೋಗದಲ್ಲಿ ಆಯೋಜಿಸಲಾದ 2123ನೇ ಮದ್ಯವರ್ಜನ ಶಿಬಿರವು ಸೋಮವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಹರಿಕೃಷ್ಣ ಭಟ್ ಅವರು ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇವಸ್ಥಾನದ ಸಾನ್ನಿಧ್ಯದಲ್ಲಿ ಮದ್ಯವರ್ಜನ ಶಿಬಿರ ನಡೆಯುತ್ತಿರುವುದು ಪುಣ್ಯದ ಕಾರ್ಯವಾಗಿದೆ. ಮದ್ಯಪಾನವನ್ನು ತ್ಯಜಿಸಿ ಉತ್ತಮ ಜೀವನ ನಡೆಸಲು ಶಿಬಿರಾರ್ಥಿಗಳು ದೃಢ ಸಂಕಲ್ಪ ಕೈಗೊಳ್ಳಬೇಕು. ಎಂಟು ದಿನಗಳ ಶಿಬಿರದ ಸದುಪಯೋಗ ಪಡೆದುಕೊಂಡು ಹೊಸ ಜೀವನವನ್ನು ಆರಂಭಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ 2123ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಮಾತನಾಡಿ, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಂಕಲ್ಪದಂತೆ ನಡೆಯುತ್ತಿರುವ ಮದ್ಯವರ್ಜನ ಶಿಬಿರಗಳ ಮೂಲಕ ಈವರೆಗೆ ಲಕ್ಷಾಂತರ ಕುಟುಂಬಗಳು ವ್ಯಸನಮುಕ್ತ ಜೀವನದತ್ತ ಸಾಗಿವೆ. ಪೇರ್ವಾಜೆಯಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳು ಶಿಬಿರದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಬದಲಾವಣೆಯೊಂದಿಗೆ ತಮ್ಮ ಕುಟುಂಬಗಳಿಗೆ ಮರಳಬೇಕು ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಮುಡಾರು ನಿರ್ದೇಶಕರಾದ ಶ್ರೀ ಸುಧಾಕರ ಶೆಟ್ಟಿ, ಮಾಜಿ ರಾಜ್ಯ ಸಂಘಟನಾ ಅಧ್ಯಕ್ಷರಾದ ಶ್ರೀ ದೇವದಾಸ್ ಹೆಬ್ಬಾರ್ ಹಾಗೂ ಉಡುಪಿ ಜಿಲ್ಲಾ ನಿರ್ದೇಶಕರಾದ ಶ್ರೀ ನಾಗರಾಜ್ ಶೆಟ್ಟಿ ಅವರು ಭಾಗವಹಿಸಿ ಶಿಬಿರಾರ್ಥಿಗಳಿಗೆ ಹಿತನುಡಿಗಳನ್ನು ನೀಡಿದರು.

ಶಿಬಿರದ ಪ್ರಾಸ್ತಾವಿಕ ಮಾತುಗಳನ್ನು ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಶ್ರೀ ಗಣೇಶ್ ಆಚಾರ್ಯ ಅವರು ಮಾತನಾಡಿ, ಕಳೆದ 35 ವರ್ಷಗಳಿಂದ ಪೂಜ್ಯ ಹೆಗ್ಗಡೆ ದಂಪತಿಗಳ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಈವರೆಗೆ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ವ್ಯಸನಮುಕ್ತ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಎಂಟು ದಿನಗಳ ಶಿಬಿರದಲ್ಲಿ ಯೋಗ, ಧ್ಯಾನ, ಪ್ರಾರ್ಥನೆ, ಗುಂಪು ಸಲಹೆ, ಗಣ್ಯರಿಂದ ಮಾಹಿತಿ ಹಾಗೂ ಮಾರ್ಗದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಕಾರ್ಯಕ್ರಮ ಮತ್ತು ಭಜನಾ ಕಾರ್ಯಕ್ರಮಗಳ ಮೂಲಕ ಶಿಬಿರಾರ್ಥಿಗಳಲ್ಲಿ ಮಾನಸಿಕ ಪರಿವರ್ತನೆ ಹಾಗೂ ಉತ್ತಮ ಜೀವನದ ಬಗ್ಗೆ ಆತ್ಮವಿಶ್ವಾಸ ಮೂಡಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಗೌರವ ಉಪಸ್ಥಿತಿಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಪ್ರಭಾಕರ್ ಬಂಗೇರ, ತಾಲೂಕು ಜನಜಾಗೃತಿ ಅಧ್ಯಕ್ಷರಾದ ಶ್ರೀ ಉದಯ್ ಕುಮಾರ್ ಹೆಗ್ಡೆ, ನಿಯೋಜಿತ ಅಧ್ಯಕ್ಷರಾದ ಶ್ರೀ ವೃಷಭರಾಜ್ ಕಡಂಬ, ಜಿಲ್ಲಾ ವೇದಿಕೆ ಸದಸ್ಯರಾದ ಶ್ರೀ ಮಹಾವೀರ್ ಜೈನ್, ಶ್ರೀ ಹರೀಶ್ಚಂದ್ರ ತೆಂಡುಲ್ಕರ್, ಶ್ರೀ ಕಮಲಾಕ್ಷ ನಾಯಕ್, ಶ್ರೀ ತಾರನಾಥ್ ಶೆಟ್ಟಿ, ವಲಯಾಧ್ಯಕ್ಷರಾದ ಶ್ರೀ ವಾಸು ಶೆಟ್ಟಿ, ಶ್ರೀ ಉದಯ್ ವಿ. ಶೆಟ್ಟಿ, ಶಿಬಿರಾಧಿಕಾರಿ ಶ್ರೀ ದೇವಿಪ್ರಸಾದ್ ಸುವರ್ಣ, ಆರೋಗ್ಯ ಸಹಾಯಕಿ ಶ್ರೀಮತಿ ಜಯಲಕ್ಷ್ಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸೆಪ್ಟೆಂಬರ್ 29ರವರೆಗೆ ಎಂಟು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ, ವೈದ್ಯಕೀಯ ಚಿಕಿತ್ಸೆ, ಯೋಗ ಹಾಗೂ ಸಮಾಲೋಚನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.