Invitation for Nava jeevanotsava Conference

deaddiction News Leave a Comment

1991ರಲ್ಲಿ ಮದ್ಯಮುಕ್ತ ಸಮಾಜ ನಿರ್ಮಿಸುವ ದೂರದೃಷ್ಟಿಯಿಂದ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭವಾದ ‘ಜನಜಾಗೃತಿ’ ಎಂಬ ಜನಾಂದೋಲನ ಇಂದು ಕರ್ನಾಟಕ ರಾಜ್ಯಾದ್ಯಂತ ವ್ಯಾಪಿಸಿದೆ. ಸಮಾಜಕ್ಕೆ ಶಾಪವಾಗಿ ಕುಟುಂಬಗಳ ಅವನತಿಗೆ ಕಾರಣವಾಗುವ ಮದ್ಯ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಯೇ ಜನಜಾಗೃತಿ ವೇದಿಕೆಯ ಮುಖ್ಯಧ್ಯೇಯವಾಗಿದೆ. ಕಳೆದ 25 ವರ್ಷಗಳಿಂದ ಈ ಆಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಂಘಟಿತ ಪ್ರಯತ್ನ ನಡೆಸಲಾಗಿದೆ. ಇದಕ್ಕಾಗಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಸಮಾನ ಮನಸ್ಕರ ವೇದಿಕೆಗಳನ್ನು ರಚಿಸಲಾಗಿದೆ. ಸಾವಿರಾರು ಕಾರ್ಯಕರ್ತರು ಈ ವೇದಿಕೆಗಳ ಮೂಲಕ ನಿಸ್ವಾರ್ಥ ಸೇವೆ ನೀಡುವುದಲ್ಲದೆ
ತನು-ಮನ- ಧನಗಳಿಂದ ಸಹಕರಿಸುತ್ತಿದ್ದಾರೆ. ವೇದಿಕೆಯ ಪ್ರಮುಖ ಚಟುವಟಿಕೆಗಳಲ್ಲಿ ‘ಸಮುದಾಯ ಮದ್ಯವರ್ಜನ ಶಿಬಿರ’ ಒಂದಾಗಿದೆ.

ಇಂದು ಈ ಶಿಬಿರಗಳು ಸಮಾಜದ ಅತೀ ಅಗತ್ಯದ ಕಾರ್ಯಕ್ರಮವಾಗಿ ಬಿಂಬಿತವಾಗುತ್ತಿದೆ ಇದುವರೆಗೆ 1149 ಶಿಬಿರಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡು 78,038 ಜನರಿಗೆ ‘ಮನಃಪರಿವರ್ತನೆ’ ಮಾಡಿ ನವಜೀವನ ಸಮಿತಿಗಳ ಮೂಲಕ ವ್ಯಸನಮುಕ್ತರಾಗಲು ಅವಕಾಶ ನೀಡಲಾಗಿದೆ. ಶಿಬಿರಗಳನ್ನು ಗ್ರಾಮ ಗ್ರಾಮಗಳಲ್ಲಿ ಆಯೋಜಿಸಲಾಗುತ್ತಿದ್ದು, ಕನಿಷ್ಟ 8 ದಿನಗಳಲ್ಲಿ ಗರಿಷ್ಟ ಬದಲಾವಣೆಯೊಂದಿಗೆ ಮನೆಗೆ ತೆರಳಲು ಸಹಕಾರಿಯಾಗಿದೆ. ವ್ಯಸನಮುಕ್ತರಾದ ನವಜೀವನ ಸದಸ್ಯರು ಸ್ವ-ಸಹಾಯ ಸಂಘದಲ್ಲಿ ಉಳಿತಾಯ ಮಾಡುತ್ತಿದ್ದು, ಕುಟುಂಬದ ಅಭಿವೃದ್ಧಿಗೆ ಶ್ರಮಿಸುವಲ್ಲಿ ಪ್ರೇರಣೆ, ಸಲಹೆ ನೀಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ಶಾಶ್ವತವಾಗಿ ಮುನ್ನಡೆಸಿಕೊಂಡು ಹೋಗುವ ಉದ್ದೇಶದಿಂದ ‘ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾಕೇಂದ್ರ’ವನ್ನು ನಿರ್ಮಿಸಲಾಗಿದೆ. ಈ ಕೇಂದ್ರದಲ್ಲಿ ತಿಂಗಳಿಗೆರಡರಂತೆ ಮದ್ಯವರ್ಜನ ಶಿಬಿರಗಳು ನಡೆಯುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಮಾಡಿದ ವೈಜ್ಞಾನಿಕ ಮಾದರಿಯಲ್ಲಿ ಪರಿಣತ ತಂಡದವರಿಂದ ಮನಃಪರಿವರ್ತನೆ ಮಾಡಲಾಗುತ್ತಿದೆ. ಚಿಕಿತ್ಸಾ ವ್ಯವಸ್ಥೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಕೆ.ಎಸ್.ಹೆಗ್ಡೆ ಆಸ್ಪತ್ರೆಯವರು ನಿರಂತರ ಸಹಕಾರ ನೀಡುತ್ತಿದ್ದಾರೆ. ಇದೀಗ 100 ವಿಶೇಷ ಮದ್ಯವರ್ಜನ ಶಿಬಿರ ನಡೆಯುತ್ತಿದ್ದು, ಎಲ್ಲಾ ಶಿಬಿರಗಳಲ್ಲಿ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿರುವುದು ವಿಶೇಷವಾಗಿದೆ. ಇದುವರೆಗೆ ನಡೆದ 99 ಶಿಬಿರಗಳಲ್ಲಿ 5008 ಜನರಿಗೆ ಮನಃಪರಿವರ್ತನೆಯ ಸಲಹೆ ಮತ್ತು ಚಿಕಿತ್ಸೆ ನೀಡಲಾಗಿದೆ.