ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಚಿಕ್ಕಜಾಜೂರು ತಾಲೂಕಿನ ಮಲ್ಲಾಡಿಹಳ್ಳಿಯ ಶ್ರೀ ಬನಶಂಕರಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಚಿಕ್ಕಜಾಜೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ ಮತ್ತು ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ 1818 ನೇ ಮಧ್ಯವರ್ಜನ ಶಿಬಿರ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾನವ ಜನ್ಮ ಮಣ್ಣಲ್ಲಿ ಮಣ್ಣಾಗುವ ಮೊದಲು ಈ ಭೂಮಿಯ ಮೇಲೆ ಏನನ್ನಾದರೂ ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕು ಮದರ್ ತೆರೇಸಾ, ಡಾಕ್ಟರ್ ಬಿ. ಆರ್. ಅಂಬೇಡ್ಕರ್, ಸರ್. ಎಂ. ವಿಶ್ವೇಶ್ವರಯ್ಯ ನಮ್ಮ ನಿಮ್ಮ ಹಾಗೆಯೇ ಬದುಕಿ ಮುಂದಿನ ಪೀಳಿಗೆ ಇರುವವರಿಗೆ ಶಾಶ್ವತವಾಗಿ ನೆನಪಿನಲ್ಲಿರುವ ಕೆಲಸವನ್ನು ಮಾಡಿ ಭೌತಿಕವಾಗಿ ನಮ್ಮ ಜೊತೆಗಿದ್ದಾರೆ ಈ ಮಧ್ಯವರ್ಜನ ಶಿಬಿರದಿಂದ ನೀವುಗಳು ಮದ್ಯಪಾನ ತ್ಯಜಿಸಿ ಮಕ್ಕಳಿಗೆ ಆದರ್ಶ ತಂದೆಯಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರು ಶ್ರೀಮತಿ ಗೀತಾ ಬಿ. ರವರು ಸಲಹೆ ನೀಡಿದರು. ಮದ್ಯಮುಕ್ತ ಬದುಕು ಕಟ್ಟಿಕೊಳ್ಳಲು ನಮ್ಮ ಸಂಸ್ಥೆಯ ಈ ಮದ್ಯವರ್ಜನ ಶಿಬಿರ ಸಹಕಾರಿಯಾಗಿದೆ. ನಾವು ಶಿಕ್ಷಣ ಪಡೆದು ಬರೆಯುವ ಪರೀಕ್ಷೆಯಲ್ಲಿ ಒಮ್ಮೆ ಅನುತ್ತೀರ್ಣರಾದರು ಪುನಃ ಪರೀಕ್ಷೆ ಬರೆದು ಉತ್ತೀರ್ಣರಾಗಬಹುದು, ಆದರೆ ಒಮ್ಮೆ ನಮ್ಮ ಅಮೂಲ್ಯ ಜೀವನದಲ್ಲಿ ನಡೆಯುವ ಪರೀಕ್ಷೆಯಲ್ಲಿ ಫೇಲಾದರೆ ಮತ್ತೊಮ್ಮೆ ಆ ಪರೀಕ್ಷೆ ಬರೆದು ಪಾಸಾಗಲು ಸಾಧ್ಯವಿಲ್ಲ. ಈಗಾಗಲೇ ಮದ್ಯಪಾನ ಮಾಡಿ ತಮ್ಮ ಅಮೂಲ್ಯ ಬದುಕನ್ನು ಕಳೆದುಕೊಂಡಿರುವವರು ಮದ್ಯಪಾನ ತ್ಯಜಿಸಿ ನವಜೀವನಕ್ಕೆ ಕಾಲಿಡುವುದರ ಜೊತೆಗೆ ಮಕ್ಕಳಿಗೆ ಆದರ್ಶ ತಂದೆಯಾಗಿ ಹೆಂಡತಿಗೆ ಗೌರವದ ಗಂಡನಾಗಿ ಬದುಕು ನಡೆಸಬೇಕಿದೆ ಒಂದು ಸುಸಂಸ್ಕೃತ ಕುಟುಂಬದಲ್ಲಿ ಸಿಗುವ ನೆಮ್ಮದಿ ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ನಿಮ್ಮ ಮಗುವನ್ನು ಚಿಕ್ಕಂದಿನಿಂದಲೂ ಅತ್ಯಂತ ಪ್ರೀತಿಯ ಅಪ್ಪುಗೆಯಿಂದ ಬೆಳೆಸಿದಾಗ ಮುಂದೆ ಆ ಮಗು ನಿಮ್ಮನ್ನ ಪ್ರೀತಿಸುತ್ತದೆ. ನೀವು ಮದ್ಯದ ಅಮಲಿನಲ್ಲಿ ಇದ್ದರೆ ಆ ಮಗು ಅನಿವಾರ್ಯವಾಗಿ ಇನ್ನೊಬ್ಬರ ಅಪ್ಪುಗೆ ಬಯಸುತ್ತದೆ. ಮದ್ಯವ್ಯಸನಿಗೆ ಸಮಾಜದಲ್ಲಿ ಕುಡುಕ ಎಂಬ ಹಣೆಪಟ್ಟಿ ಪ್ರಾಪ್ತಿಯಾಗುತ್ತದೆ. ವ್ಯಸನ ಮುಕ್ತ ಬದುಕು ನಿಮ್ಮದಾಗಿ ಮನೆಯಲ್ಲಿ ಹೆಂಡತಿ, ತಂದೆ, ತಾಯಿ, ಮಕ್ಕಳೊಂದಿಗೆ ಸುಖೀ ಕುಟುಂಬ ನಿಮ್ಮದಾಗಲಿ ಎಂದರು. ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಚಿತ್ರದುರ್ಗ ಜಿಲ್ಲಾಧ್ಯಕ್ಷ ಶ್ರೀ ಬಿ. ಪಿ. ಓಂಕಾರಪ್ಪ ರವರು ಮಾತನಾಡಿ ಧರ್ಮಸ್ಥಳದ ಸಂಸ್ಥೆಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳು ನಡೆದಾಡವ ವಿಶ್ವ ವಿದ್ಯಾಲಯವಿದ್ದಂತೆ, ಇಲ್ಲಿ ನಡೆಯುವ ಸ್ವಾಸ್ತ್ಯ ಸಂಕಲ್ಪ, ಮದ್ಯವರ್ಜನ ಶಿಬಿರ ಕಾರ್ಯಕ್ರಮಗಳು ಸಮಾಜದ ಅನಿಷ್ಠ ಪದ್ಧತಿಗಳನ್ನು ದೂರ ಮಾಡಿ ನೆಮ್ಮದಿಯ ಜೀವನಕ್ಕೆ ನಾಂದಿ ಹಾಡುತ್ತದೆ. ಮದ್ಯ ವ್ಯಸನಿಯ ಹೆಂಡತಿಯನ್ನು ಸಮಾಜ ಕುಡುಕನ ಹೆಂಡತಿ ಎಂದು ಹೀಯಾಳಿಸುತ್ತದೆ ನಂತರ ಮಗನನ್ನ ಕುಡುಕನ ಮಗ ಎಂದು ಹೇಳುತ್ತಾರೆ. ನಿಮ್ಮ ಕುಡಿತದ ಜೀವನ ನಿಮ್ಮ ಹೆಂಡತಿ ಮಕ್ಕಳ ನೆಮ್ಮದಿಯನ್ನ ಹಾಳುಮಾಡುತ್ತದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬದವರ ಅತಿಯಾದ ಮದ್ಯವ್ಯಸನ ಕುಟುಂಬದ ಅವನತಿಗೆ ಕಾರಣವಾಗುತ್ತದೆ. ಮನೆಯಲ್ಲಿ ಒಬ್ಬ ಕುಡುಕನಿದ್ದರೆ ಒಂದು ತಲೆಮಾರು ಆ ಕುಟುಂಬ ಅಭಿವೃದ್ಧಿ ಕಾಣುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ನಿರ್ದೇಶಕರು ಶ್ರೀ ದಿನೇಶ್ ಪೂಜಾರಿ, ಜನಜಾಗೃತಿ ಯೋಜನಾಧಿಕಾರಿ ಶ್ರೀ ನಾಗರಾಜ್, ಮದ್ಯವರ್ಜನ ಶಿಬಿರದ ಅಧ್ಯಕ್ಷ ಶ್ರೀ ರಮೇಶ್, ಚಿಕ್ಕಜಾಜೂರು ಯೋಜನಾಧಿಕಾರಿಗಳು ಶ್ರೀ ವಸಂತ್ ಎಸ್., ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ದೇವರಾಜ್ ಚಿತ್ರಹಳ್ಳಿ, ಶ್ರೀ ರಮೇಶ್ ಗೌಡ್ರು, ಶ್ರೀ ಸಂತೋಷ್ ಬಿಸನಹಳ್ಳಿ, ಶ್ರೀ ಜಗದೀಶ್, ಶ್ರೀ ತಿಪ್ಪೇಶ ಎಚ್., ಶ್ರೀ ಗಂಗಾಧರಪ್ಪ, ಶ್ರೀಮತಿ ಸರಸ್ವತಿ, ಶ್ರೀ ಬಸುವರಾಜ್ ತುಮ್ಮಿನಕಟ್ಟೆ, ಮೇಲ್ವಿಚಾರಕರು ಕವಿತಾ, ಜನಜಾಗೃತಿ ಮೇಲ್ವಿಚಾರಕರು ರುದ್ರಪ್ಪ, ನವಜೀವನ ಸಮಿತಿಯ ಸತೀಶ್, ಧರ್ಮಸ್ಥಳ ಸಂಸ್ಥೆಯ ಸಿಬ್ಬಂದಿ ವರ್ಗದವರು, ಸೇವಾಪ್ರತಿನಿಧಿಗಳು, ಊರಿನ ಗಣ್ಯರು, ಒಕ್ಕೂಟ ಪದಾಧಿಕಾರಿಗಳು, ಶಿಬಿರಾರ್ಥಿಗಳು ಮತ್ತು ಕುಟುಂಬದ ಸದಸ್ಯರು ಹಾಜರಿದ್ದರು.
