ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ .ಬಿ ಸಿ ಟ್ರಸ್ಟ್ (ರಿ.) ಹಾಸನ ಜಿಲ್ಲೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಹಾಸನ ಜಿಲ್ಲೆ ಇದರ ವತಿಯಿಂದ ಪರಮಪೂಜ್ಯ ಡಾ| ಡಿ. ವೀರೇಂದ್ರ ಹೆಗಡೆಯವರು ಮತ್ತು ಮಾತೃಶ್ರೀ ಡಾ| ಹೇಮಾವತಿ ಹೆಗಡೆಯವರ ಕೃಪಾ ಆಶೀರ್ವಾದಗಳೊಂದಿಗೆ ಹಾಸನ ಜಿಲ್ಲೆಯ ಗೋಮತಿ ಸಭಾಭವನದಲ್ಲಿ ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಪದಾಧಿಕಾರಿಗಳ ಸಮ್ಮಿಲನ ಕಾರ್ಯಕ್ರಮವು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿಯ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿ, ಮೈಸೂರು ಪ್ರಾದೇಶಿಕ ವಿಭಾಗದ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜಯರಾಮ ನೆಲ್ಲಿತ್ತಾಯ, ಹಾಸನ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಡಾ| ನವೀನ್ ಚಂದ್ರ ಶೆಟ್ಟಿ ಹಾಗೂ 7 ಜಿಲ್ಲೆಯ ಜನಜಾಗೃತಿ ವೇದಿಕೆಯ ಅಧ್ಯಕ್ಷರು ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಸತೀಶ್ ಹೊನ್ನಾವಳಿ ರವರು ಮಾತನಾಡುತ್ತಾ ಸಣ್ಣ ಸಸಿ ಹೆಮ್ಮರವಾಗುವಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬೆಳೆದು ಬಂದಿದೆ. ಪರಮಪೂಜ್ಯ ಖಾವಂದರ ಕಾರ್ಯಗಳೇ ನಮಗೆ ಆದರ್ಶಪ್ರಾಯ, ಯಾವತ್ತೂ ಎಲ್ಲರೂ ಸನ್ಮಾರ್ಗದಲ್ಲಿ ನಡೆಯಬೇಕು, ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ತೋರಬೇಕು, ಸಮಾಜಕ್ಕೆ ನಾನು ಏನು ಕೊಡುಗೆ ನೀಡಿದ್ದೇನೆ ಅನ್ನುವುದೇ ಮುಖ್ಯ ಎಂದು ಹಲವು ನಿದರ್ಶನಗಳೊಂದಿಗೆ ಮನವರಿಕೆ ಮಾಡಿಸಿದರು. ನಂತರದಲ್ಲಿ ಆಶಯ ಭಾಷಣವನ್ನು ಗೌರವಾನ್ವಿತ ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಬಿ. ಜಯರಾಮ್ ನೆಲ್ಲಿತ್ತಾಯ ರವರು ದೇವರನ್ನು ಮೆಚ್ಚಿಸುವಂತಹ ಕ್ಷಣ ನಮ್ಮ ಜೀವನದ ಸೌಭಾಗ್ಯ ವಾಗಿರುತ್ತದೆ. ಕೆಲಸದಲ್ಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಬದ್ಧತೆ ತೋರಿದರೆ ನರಜನ್ಮದಲ್ಲಿ ಸಾರ್ಥಕತೆ ಲಭಿಸುತ್ತದೆ, ಸಮಾಜದಲ್ಲಿ ಸನ್ಮಾರ್ಗದಲ್ಲಿ ನಡೆಯುತ್ತಾ ಇರುವ ಪೂಜ್ಯರ ವ್ಯಕ್ತಿತ್ವವೇ ನಮಗೆ ಪ್ರೇರಣೆ, ಪೂಜ್ಯರ ಚಿಂತನೆಯನ್ನು ಸಮಾಜಕ್ಕೆ ನೀಡುವಂತಹ ಯೋಧರಾಗಬೇಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ, ಒಂದು ವ್ಯಕ್ತಿಯು ಬದಲಾದರೆ ಒಂದು ಮನೆ ಬದಲಾದಂತೆ ಅದೇ ರೀತಿ ಒಂದು ಮನೆ ಬದಲಾದರೆ ಸಮಾಜ ಬದಲಾದಂತೆ ಎನ್ನುವ ಅಂಶಗಳನ್ನಿಟ್ಟು ಬಸವಣ್ಣ ಹಾಗೂ ಗಾಂಧೀಯವರ ಆದರ್ಶಗಳ ಬಗ್ಗೆ ತಿಳಿಸಿದರು. ಸಮಾಜವು ದುಶ್ಚಟ, ದುರಾಭ್ಯಾಸ ಹಾಗೂ ಇನ್ನಿತರ ಕೆಟ್ಟ ಕೆಲಸಗಳಿಂದ ದೂರವಿರಬೇಕು, ಪ್ರತಿ ಹಳ್ಳಿಯ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಕಟ್ಟಕಡೆಯ ವ್ಯಕ್ತಿಯು ಸಮಾಜದಲ್ಲಿ ಉನ್ನತ ಸ್ಥಾನ ಹೋಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅವಿರತ ಪರಿಶ್ರಮ ಪಡುತ್ತದೆ ಹಾಗೂ ಈ ವರ್ಷದಲ್ಲಿ ಮೈಸೂರು ಪ್ರಾದೇಶಿಕ ವ್ಯಾಪ್ತಿಯು ಜನಜಾಗೃತಿ ವೇದಿಕೆಯ ಸಹಕಾರದೊಂದಿಗೆ ಮಾಡಲಿರುವ ಸಮಾಜಮುಖಿ ಕೆಲಸಗಳ ಬಗ್ಗೆ ತಿಳಿಸಿದರು. ಶ್ರೀ ರಾಜಣ್ಣ ಮು. ಕೊರವಿ ರವರು ದುಶ್ಚಟ ಮುಕ್ತ ಸಮಾಜಕ್ಕಾಗಿ ಹೇಗೆ ಯೋಧರು ದೇಶವನ್ನು ರಕ್ಷಣೆ ಮಾಡುತ್ತಾರೋ ಅದೇ ರೀತಿ ಪೂಜ್ಯ ಖಾವಂದರು ಸಮಾಜವನ್ನು ರಕ್ಷಣೆ ಮಾಡುತ್ತಿದ್ದಾರೆ, ಸಮಾಜದ ರಕ್ಷಣೆಗಾಗಿ ಪಣತೊಟ್ಟು ಕೆಲಸ ಮಾಡಬೇಕು ಎಂದು ತಿಳುವಳಿಕೆ ನೀಡಿದರು. ಸಮಾಜದ ರಕ್ಷಣೆಗೆ ಹಾಗೂ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜೊತೆ ಎಂದೂ ಸಹಕಾರ ಹಾಗೂ ಸಹಾಯ ಮಾಡಲು ಸಿದ್ಧ ಎಂದು ಶ್ರೀ ಶ್ರೇಯಸ್ ಪಟೇಲ್ – ಸಂಸದರು ಹಾಸನ ಲೋಕಸಭಾ ಕ್ಷೇತ್ರ ಇವರು ತಿಳಿಸಿದರು. ನವಜೀವನ ಸಮಿತಿ ಸದಸ್ಯರಿಗೆ, ಹೊಸದಾಗಿ ಆಯ್ಕೆಗೊಂಡಂತಹ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳಿಗೆ, ಏಳು ಜಿಲ್ಲೆಯ ಜಿಲ್ಲಾ ನಿರ್ದೇಶಕರಿಗೆ, ಏಳು ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಿಗೆ ಅಭಿನಂದನೆ ನಡೆಸುವುದರ ಜೊತೆಗೆ ಜವಾಬ್ದಾರಿ ಹಸ್ತಾಂತರ ಕಾರ್ಯ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ಡಾ| ನವೀನ್ ಚಂದ್ರ ಶೆಟ್ಟಿ ರವರು ಅಧ್ಯಕ್ಷೀಯ ಭಾಷಣದಲ್ಲಿ ಭಕ್ತಿಯನ್ನು ಶಕ್ತಿಯಾಗಿ ಮಾಡಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಪರಮ ಪೂಜ್ಯರನ್ನು ಅಭಿನಂದಿಸಿದರು. ಶಿಸ್ತು ಶ್ರದ್ದೆಗೆ ಇನ್ನೊಂದು ಹೆಸರೇ ಧರ್ಮಸ್ಥಳ, ಧರ್ಮಸ್ಥಳದಂತಹ ಇನ್ನೊಂದು ಕ್ಷೇತ್ರ ಪ್ರಪಂಚದಲ್ಲೇ ಇಲ್ಲ, ಆಡು ಮುಟ್ಟದ ಸೊಪ್ಪಿಲ್ಲ ಧರ್ಮಸ್ಥಳ ಕ್ಷೇತ್ರ ಮಾಡದಂತಹ ಸಮಾಜಮುಖಿ ಕೆಲಸಗಳಿಲ್ಲ ಯಾವತ್ತೂ ಕೂಡ ಒಳ್ಳೆಯ ಕೆಲಸಕ್ಕೆ ಕೈಜೋಡಿಸಬೇಕು ಎಂದು ವಿನಂತಿಸಿದರು.
