ಉಡುಪಿ ಜಿಲ್ಲೆಯ ಕುಂದಾಪುರ-2 ತಾಲೂಕಿನ 1677ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ

Janajagurthi Vedike News

ಕುಂದಾಪುರ : “ಸಮಾಜ ಸುಧಾರಣೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಲಾದ ಬಹುದೊಡ್ಡ ಕೊಡುಗೆ ಗ್ರಾಮಾಭಿವೃದ್ಧಿ ಯೋಜನೆ. ಸಮಾಜದ ಅಭಿವೃದ್ಧಿಗೆ ಅಮಲು ವ್ಯಸನ ದೊಡ್ಡ ತಡೆ ಎಂಬುದನ್ನರಿತ ಖಾವಂದರು, ಮದ್ಯವರ್ಜನ ಶಿಬಿರಗಳನ್ನು ಯೋಜನೆಯ ಅಂಗವಾಗಿ ಆರಂಭಿಸಿ, ಇಂದು ಸಹಸ್ರಾರು ಕುಟುಂಬಗಳು ಗೌರವದ ಜೀವನ ನಡೆಸಲು ಕಾರಣರಾಗಿದ್ದಾರೆ. ಶಿಬಿರಾರ್ಥಿಗಳು ಕುಟುಂಬದೊಡನೆ ಬೆರೆತಾಗ ಮಾತೆಯರು ಅವರನ್ನು ಗೌರವದಿಂದ ನಡೆಸಿಕೊಂಡು, ಮತ್ತೆ ವ್ಯಸನ ಮರುಕಳಿಸದಂತೆ ಎಚ್ಚರವಹಿಸಬೇಕು. ವ್ಯಸನದ ನೆನಪು ತಡೆಯಲು ಭಜನೆ, ಸದ್ಗ್ರಂಥಗಳ ಓದು ಸುಲಭ ಮಾರ್ಗ” – ಎಂದು ಕುಂದಾಪುರ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ, ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಬೆಳ್ತಂಗಡಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಕೋಟೇಶ್ವರ ವಲಯ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಗಳು, ಊರ ಗಣ್ಯರು ಮತ್ತಿತರ ಸಂಘ -ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೋಟೇಶ್ವರದಲ್ಲಿ ಹಮ್ಮಿಕೊಂಡ 1677ನೇ ಮದ್ಯವರ್ಜನ ಶಿಬಿರ ಸಮಾರೋಪಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೆಳ್ತಂಗಡಿ ಜನಜಾಗೃತಿ ಕಚೇರಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ, ಅಮಲು ವ್ಯಸನಿಗಳು ಶಿಬಿರಕ್ಕೆ ಬರುವಾಗಿನ ಸ್ಥಿತಿಗಿಂತ ಇಂದು ವ್ಯಸನ ತೊರೆದು ಹೊರಹೋಗುವಾಗ ಬಹುದೊಡ್ಡ ಬದಲಾವಣೆ ಇದೆ. ಇದುವರೆಗೆ ಅಂತವರು ಧರ್ಮಸ್ಥಳಕ್ಕೆ ಸ್ವಾಮಿಯ ದರ್ಶನಕ್ಕಾಗಿ ಬರುತ್ತಿದ್ದರೆ, ಇಂದು ಸ್ವಾಮಿಯೇ ಅವರೊಂದಿಗೆ ಅವರ ಮನೆಗೆ ಬರುತ್ತಿದ್ದಾರೆ. ಚಟ ಮುಕ್ತರು ಇಂದು ಶಿವಸ್ವರೂಪಿಗಳಾಗಿ ಬದಲಾಗಿದ್ದಾರೆ ಎಂದರು. ಶ್ರೀನಿವಾಸ ಕುಂದರ್, ತಾಲೂಕು ಭಜನಾ ಪರಿಷತ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿದರು. ಶಿಬಿರಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಹಭಾಗಿ ಸಂಘ – ಸಂಸ್ಥೆಗಳಿಗೆ ಅಭಿನಂದನಾ ಪತ್ರಗಳನ್ನು ನೀಡಲಾಯಿತು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹೇಳಿ, ತಮ್ಮಲ್ಲಾದ ಬದಲಾವಣೆಗಳ ಬಗ್ಗೆ ವಿವರಿಸಿ, ಯೋಜನೆ ಕಾರ್ಯಗಳನ್ನು ಶ್ಲಾಘಿಸಿದರು. 1677ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜಗೋಪಾಲ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗಣ್ಯರನ್ನು ಸನ್ಮಾನಿಸಲಾಯಿತು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಉಡುಪಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಬಿ ಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕುಂದಾಪುರ ಕೇಂದ್ರ ಸಮಿತಿ ಅಧ್ಯಕ್ಷೆ ಶೋಭಾಚಂದ್ರ, ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್, ಯೋಗ ಗುರು ಆನಂದ ಕುಂದರ್, ಸುಬ್ಬಣ್ಣ ಶೆಟ್ಟಿ, ಕೋಟೇಶ್ವರ, ಕುಂಭಾಶಿ, ಬೀಜಾಡಿ, ಗೋಪಾಡಿ, ಕೋಣಿ ಗ್ರಾಮ ಪಂಚಾಯತ್ ಸದಸ್ಯರು, ಸಹಭಾಗಿ ಸಂಘ – ಸಂಸ್ಥೆಗಳ ಮುಖ್ಯಸ್ಥರು, ಯೋಜನೆಯ ವಿವಿಧ ಅಂಗಗಳ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಯೋಜನಾಧಿಕಾರಿ ನಾರಾಯಣ ಪಾಲನ್ ಸ್ವಾಗತಿಸಿದರು. ಕೋಟೇಶ್ವರ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸೇವಾ ಪ್ರತಿನಿಧಿಗಳಾದ ಸುಶೀಲಾ ಶೇಟ್, ಜಯಂತಿ ಶೆಟ್ಟಿ ಸಹಕರಿಸಿದರು. ಕೋಟೇಶ್ವರ ವಲಯ ಮೇಲ್ವಿಚಾರಕಿ ವೇದಾವತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಎಂಟು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ 52 ಮಂದಿ ಮದ್ಯ ವ್ಯಸನಿಗಳು ನೋಂದಾಯಿಸಿಕೊಂಡಿದ್ದು, ವ್ಯಸನ ಮುಕ್ತರಾಗಿ ನವಜೀವನಕ್ಕೆ ಪಾದಾರ್ಪಣೆ ಮಾಡಿದರು.