ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ) ಕನಕಪುರ ತಾಲ್ಲೂಕು ಮತ್ತು ಜನಜಾಗೃತಿ ವೇದಿಕೆ ವತಿಯಿಂದ ಕನಕಪುರ ತಾಲ್ಲೂಕಿನ ಹೊಸದುರ್ಗ ಶ್ರೀ ರಾಮ ಪ್ರೌಢಶಾಲೆ ಆವರಣದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜನಜಾಗೃತಿ ವೇದಿಕೆಯ ಸದಸ್ಯರಾದ ಸಂತೋಷ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ತಂಬಾಕು ಸೇವನೆಯಿಂದ ದೂರವಿರಿ, ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಿ ಎಂಬ ಕರೆ ನೀಡಿದರು. ಹೊಸದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕರಾದ ಸಕ್ರಿನಾಯ್ಕ್ ರವರು ವಿಶ್ವ ತಂಬಾಕು ದಿನಾಚರಣೆಯ ದ್ಯೇಯೋದ್ದೇಶ, ಮಹತ್ವ, ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು ಮತ್ತು ಸಿಗರೇಟ್ ಅಂಡ್ ಅದರ್ ಟೊಬ್ಯಾಕೋ ಆಕ್ಟ್ -2003 ದ ನಿಷೇಧಿತ ಸೆಕ್ಷನ್ ಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೋಕಿನ ಮಾನ್ಯ ಯೋಜನಾಧಿಕಾರಿಗಳಾದ ಸಂತೋಷ್. ಕೆ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ದುಶ್ಚಟ ಮುಕ್ತ ಸಮಾಜ ನಿರ್ಮಿಸಲು ಹಲವು ಕಾರ್ಯಕ್ರಮಗಳಾದ ಮಧ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದರು. ಶ್ರೀ ರಾಮ ಪ್ರೌಢಶಾಲಾ ಮುಖ್ಯಸ್ಥರಾದ ಡಾ. ನಾಗರಾಜು ರವರು ಅಧ್ಯಕ್ಷೀಯ ಮಾತಿನಲ್ಲಿ ದಿನಾಚರಣೆಗಳು ಬರೀ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು ಅನುಷ್ಠಾನಗೊಳ್ಳಬೇಕು ಎಂದು ಕರೆ ಕೊಟ್ಟರು. ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ವಸಂತಕುಮಾರಿ, ಕೋಡಿಹಳ್ಳಿ ವಲಯದ ಮೇಲ್ವಿಚಾರಕಿ ಪ್ರತಿಭಾ, ತಾಲ್ಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ನಳಿನಾ , ಸೇವಾಪ್ರತಿನಿಧಿ ಭವ್ಯ, ಶ್ರೀರಾಮ ಪ್ರೌಢಶಾಲೆಯ ಶಿಕ್ಷಕ ವೃಂದ, ಮತ್ತು ಮಕ್ಕಳು ಭಾಗವಹಿಸಿದ್ದರು.
