ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮ

Janajagurthi Vedike News

ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ನಾಗರಾಜ್ ರಾವ್ ಕಲ್ಕಟ್ಟೆ ರವರು ಪ್ರಾಸ್ತಾವಿಕ ನುಡಿಳನ್ನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ| ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳವರು (ಶ್ರೀ ಬಸವತತ್ವ ಪೀಠ ಕಲ್ಯಾಣ ನಗರ ಚಿಕ್ಕಮಗಳೂರು) ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ದಿವ್ಯ ಸಾನಿಧ್ಯವನ್ನು ವಹಿಸಿದ್ದ ಸ್ವಾಮೀಜಿಯವರು ಧರ್ಮಾಧಿಕಾರಿಗಳ ಆಲೋಚನೆ ಶ್ಲಾಘನೀಯ, ಕೇವಲ ಒಂದೆರಡು ಕಾರ್ಯಗಳಲ್ಲಿ ಸೀಮಿತವಾಗದೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಗಣನೀಯವಾಗಿ ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸುತ್ತಿದೆ. ಸರ್ಕಾರವೇ ಮಾಡದಂತಹ ಕೆಲಸಗಳು ಇಂದು ಯೋಜನೆಯ ಚಿಂತನೆಯಲ್ಲಿ ನಡೆಯುತ್ತಿದೆ. ಮದ್ಯವರ್ಜನ ಶಿಬಿರ ಹಾಗೂ ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಿದೆ ಎಂದು ಹಿತನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಕೀರ್ತಿ ಕುಮಾರ್ (ಪೊಲೀಸ್ ಸಬ್ ಇನ್ಸ್ಪೆಕ್ಟರ್, ಬಸವನಹಳ್ಳಿ ಪೊಲೀಸ್ ಠಾಣೆ, ಚಿಕ್ಕಮಗಳೂರು) ರವರು ದೇಶಕ್ಕೆ ಸೇನೆಯ ಬಲ ಹೇಗೆ ಮುಖ್ಯವಾಗಿದೆಯೋ ಹಾಗೆಯೇ ಗ್ರಾಮಾಭಿವೃದ್ದಿ ಯೋಜನೆಯ ವಿಪತ್ತು ನಿರ್ವಹಣಾ ಘಟಕವು ಪ್ರತೀ ಗ್ರಾಮಕ್ಕೂ ಸೇನೆಯಂತೆಯೇ ಶ್ರಮಿಸುತ್ತಿದೆ. ಯಾವುದೇ ಅಪೇಕ್ಷೆ ಇಲ್ಲದೆ ದುಡಿಯುವ ಸ್ವಯಂ ಸೇವಕರ ತಂಡವನ್ನು ಹೊಂದಿರುವುದು ಯೋಜನೆಯ ಶಕ್ತಿಯೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ನಿರ್ದೇಶಕರಾದ ಶ್ರೀ ಸದಾನಂದ ಬಂಗೇರ ರವರು ಯೋಜನೆಯ ವಿವಿಧ ಸಾಮಾಜಿಕ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಅಣ್ಣಾ ನಾಯ್ಕ್ (ಮುಖ್ಯೋಪಾಧ್ಯಾಯರು, ಸ.ಹಿ.ಪ್ರಾ.ಶಾಲೆ ಹಿರೇಕೊಳಲೆ) ರವರು ಮಾತನಾಡಿ ಗಾಂಧಿಜಯಂತಿ ಆಚರಣೆ ಹಾಗೂ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡರೆ ಉತ್ತಮ ಹಾಗೂ ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಯಶಸ್ಸನ್ನು ಕಾಣಬಹುದು ತಿಳಿಸಿದರು. ಕಾರ್ಯಕ್ರಮದಲ್ಲಿ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಮಂಜೂರಾಗಿದ್ದ ಸಲಕರಣೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎರಡೂ ತಾಲೂಕಿನ ಯೋಜನಾಧಿಕಾರಿಗಳು, ಚಿತ್ರದುರ್ಗ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿಗಳಾದ ಶ್ರೀ ನಾಗರಾಜ್ ಕುಲಾಲ್, ಜನಜಾಗೃತಿ ವೇದಿಕೆ ಸದಸ್ಯರು, ಪ್ರಗತಿಬಂಧು/ಸ್ವಸಹಾಯ ಸಂಘದ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಮೇಲ್ವಿಚಾರಕರು ಹಾಗೂ ಸೇವಾಪ್ರತಿನಿಧಿಯವರು ಉಪಸ್ಥಿತರಿದ್ದರು.