ಹಾಸನ ಜಿಲ್ಲಾ ಜನಜಾಗೃತಿ ವೇದಿಕೆಯ 2025-26 ನೇ ಸಾಲಿನ ಪ್ರಥಮ ಸಭೆ

Janajagurthi Vedike Uncategorized

ಹಾಸನ ಜಿಲ್ಲಾ ಜನಜಾಗೃತಿ ವೇದಿಕೆಯ 2025-26ನೇ ಸಾಲಿನ ಪ್ರಥಮ ಸಭೆಯನ್ನು ಹಾಸನದ ತಣ್ಣೀರು ಹಳ್ಳ ಮಠದಲ್ಲಿ ನಡೆಸಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವೈದ್ಯರಾದ ಶ್ರೀ ನವೀನ್ ಚಂದ್ರ ಶೆಟ್ಟಿಯವರು ವಹಿಸಿದ್ದು, ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಗೌರವಾನ್ವಿತ ಶ್ರೀ ಜಯಂತ್ ಪೂಜಾರಿ ಸರ್ ರವರು, ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ಸೋಮಶೇಖರ್ ರವರು, ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಸುರೇಶ್ ಮೊಯ್ಲಿ ಸರ್ ರವರು ಹಾಗೂ ಏಳೂ ತಾಲೂಕುಗಳ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಕ್ಷೇತ್ರ ಯೋಜನಾಧಿಕಾರಿಗಳು, ಜಿಲ್ಲಾ ಎಂ.ಐ.ಎಸ್. ಯೋಜನಾಧಿಕಾರಿಯವರು, ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಯವರು ಭಾಗವಹಿಸಿದ್ದು, ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.ಮಾನ್ಯ ಜಿಲ್ಲಾ ನಿರ್ದೇಶಕರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿ ಗತ ಸಭೆಯ ವರದಿಯನ್ನು ಮಂಡಿಸಿದರು. ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರು ಮಾತನಾಡುತ್ತಾ ಪೂಜ್ಯರ ಪ್ರೀತಿಯ ಕಾರ್ಯಕ್ರಮವಾದ ಜನಜಾಗೃತಿ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವ ಸರ್ವ ಪದಾಧಿಕಾರಿಗಳನ್ನು ಅಭಿನಂದಿಸಿದರು. ಮದ್ಯವರ್ಜನ ಶಿಬಿರಗಳು, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳು ಸೇರಿದಂತೆ ಜನಜಾಗೃತಿ ವೇದಿಕೆಯ ಎಲ್ಲಾ ಕಾರ್ಯಕ್ರಮಗಳು ಹಾಸನ ಜಿಲ್ಲೆಯಲ್ಲಿ ಮಾದರಿ ಕಾರ್ಯಕ್ರಮಗಳಾಗಿ ನಡೆಯಬೇಕೆಂದು ಹಾಗೂ ಹಾಸನ ಜಿಲ್ಲಾದ್ಯಂತ ನವಜೀವನ ಸಮಿತಿಗಳನ್ನು ಬಲವರ್ಧನೆ ಮಾಡಬೇಕೆಂದು ಸಲಹೆ ನೀಡುತ್ತಾ ಮಾರ್ಗದರ್ಶನ ಮಾಡಿದರು.ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಯವರು 2025-26ನೇ ಸಾಲಿನ ಜಿಲ್ಲೆಯ ಕ್ರಿಯಾಯೋಜನೆ ಬಗ್ಗೆ, ವಿವಿಧ ಅನುದಾನಗಳ ಬಗ್ಗೆ ವಿವರಿಸಿದರು. ಮಾನ್ಯ ಜಿಲ್ಲಾ ನಿರ್ದೇಶಕರು ಕ್ರಿಯಾ ಯೋಜನೆಯ ಪ್ರಕಾರ ಜಿಲ್ಲಾದ್ಯಂತ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ವಿಷಯವಾರು ಸಮಗ್ರ ಮಾಹಿತಿ ನೀಡಿದರು.ಈ ಸಭೆಯಲ್ಲಿ ಜನಜಾಗೃತಿ ಕಾರ್ಯಕ್ರಮಗಳ ಗುಣಮಟ್ಟದ ಅನುಷ್ಠಾನದ ಬಗ್ಗೆ ಚರ್ಚೆ ವಿಮರ್ಶೆಗಳು ನಡೆದು ಸರ್ವರ ಒಪ್ಪಿಗೆಯಂತೆ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಅಂತಿಮವಾಗಿ ಸಭಾಧ್ಯಕ್ಷರು ಪೂಜ್ಯರ ಕಾರ್ಯಕ್ರಮಗಳು ಜಿಲ್ಲಾದ್ಯಂತ ಉತ್ತಮವಾಗಿ ನಡೆಯುವಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ, ಇಂದಿನ ಸಭೆಯಲ್ಲಿ ಆರೋಗ್ಯಕರವಾದ ಚರ್ಚೆಗಳು ನಡೆದಿದೆ, ಇಂತಹ ಸಭೆಗಳಲ್ಲಿ ಎಲ್ಲರೂ ತಮ್ಮ ತಮ್ಮ ಸಲಹೆಗಳನ್ನು ನೀಡಬೇಕು ಎಂದು ಮಾತನಾಡಿದರು.ಸಭೆಯನ್ನು ಸಕಲೇಶಪುರ ತಾಲೂಕಿನ ಯೋಜನಾಧಿಕಾರಿಯವರು ನಿರೂಪಿಸಿದ್ದು, ಮಾನ್ಯ ಜಿಲ್ಲಾ ನಿರ್ದೇಶಕರು ಸ್ವಾಗತಿಸಿ ಧನ್ಯವಾದವಿತ್ತರು.