ಸಮಾಜದಲ್ಲಿ ಸರಿಯಾಗಿ ವರ್ತಿಸುವುದು ಮತ್ತು ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳುವುದೇ ಸ್ವಾಸ್ಥ್ಯ ಸಂಕಲ್ಪ ಎಂದು ಕರ್ನಾಟಕ ಜನಜಾಗೃತಿ ಸಮಿತಿಯ ರಾಜ್ಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯ್ಸ್ ಅಭಿಪ್ರಾಯಪಟ್ಟರು. ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಆರೋಗ್ಯಕ್ಕೆ ಹಾನಿಯುಂಟು ಮಾಡುವ ಸಂಗತಿಗಳಾದ ಮದ್ಯಪಾನ, ಧೂಮಪಾನ, ಡ್ರಗ್ಸ್ ಸೇವನೆಗಳಿಂದ ದೂರವಿದ್ದು, ಅವುಗಳನ್ನು ಬಳಸುವವರಿಗೂ ಸಹಕಾರ ಕೊಡದೆ ಇರುವ ಮೂಲಕ ಸಮಾಜದ ಹಾಗೂ ದೇಹದ ಸ್ವಾಸ್ಥ್ಯ ಕಾಯ್ದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.ನಿತ್ಯ ಜೀವನದಲ್ಲಿ ಆಹಾರ ವಸ್ತುಗಳು, ಪಾನೀಯ ಇತ್ಯಾದಿ ಬಳಕೆ ಮಿತವಾಗಿರಬೇಕು. ಡೀಸೆಲ್, ಪೆಟ್ರೋಲ್, ನೈಲ್ ಪಾಲಿಷ್, ವೈಟ್ನರ್ ಇತ್ಯಾದಿ ಉಪಯೋಗಿಸುವ ಸಂದರ್ಭದಲ್ಲಿ ಅವುಗಳ ಪರಿಮಳ ಹೆಚ್ಚು ಹೊತ್ತು ಮೂಗಿಗೆ ಸೋಕದಂತೆ ಎಚ್ಚರಿಕೆ ವಹಿಸಬೇಕು. ವೈದ್ಯರ ಸಲಹೆ ಪಡೆಯದೆ ಔಷಧ ಸೇವಿಸುವುದು ಸೂಕ್ತವಲ್ಲ ಎಂದು ಅವರು ಸಲಹೆ ನೀಡಿದರು.ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳ ಇದರ ಕೃಷಿ ಅಧಿಕಾರಿ ರಾಮ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಜಿರೆ ವಲಯ ಮೇಲ್ವಿಚಾರಕಿ ವನಿತಾ ಉಪಸ್ಥಿತರಿದ್ದರು.ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ಸ್ವಾಗತಿಸಿ, ವಂದಿಸಿದರು.
