ಉಡುಪಿ ಜಿಲ್ಲಾ ಪೊಲೀಸ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಸೌಖ್ಯವನ ಇವರ ಸಹಭಾಗಿತ್ವದಲ್ಲಿ ಇಂದು ಉಡುಪಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ ವ್ಯಸನ ಮುಕ್ತ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಎನ್ನುವ ವಿಷಯವಾಗಿ ಉಡುಪಿಯ ಸೌಖ್ಯ ವನದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್ ರವರು ಮಾತನಾಡಿ ಜೀವನದ ಪ್ರಥಮ ಪಾಠ ಆತ್ಮರಕ್ಷಣೆ, ಎರಡನೇಯದು ಜೀವ ರಕ್ಷಣೆ, ಪ್ರಾಣಿಪಕ್ಷಿಗಳು ಪ್ರಕೃತಿ ದತ್ತವಾಗಿ ಬದುಕುತ್ತವೆ, ಮನುಷ್ಯರು ವಿಕೃತಿ ದತ್ತವಾಗಿ ಬದುಕುವುದು ಕಾಣುತ್ತಿದ್ದೇವೆ. ಮರಳಿ ಪ್ರಕೃತಿಗೆ ಹೋದರೆ ಮಾತ್ರ ನಾವು ಬದುಕುತ್ತೇವೆ. ವಿಕೃತಿ ಕಡೆಗೆ ಹೋದರೆ ಬದುಕು ಕಷ್ಟ ಎಂದರು.ಎಲ್ಲಾ ಧರ್ಮ ಗ್ರಂಥಗಳಲ್ಲಿ ವ್ಯಸನ ಮಾಡಬಾರದು ಎಂದೇ ಹೇಳುತ್ತದೆ. ಮದ್ಯಪಾನ ಮಾಡುವವರಿಗೆ ಅಕಾಲಿಕ ಮರಣ, ಅಪಘಾತ, ಆತ್ಮಹತ್ಯೆ ಕಟ್ಟಿಟ್ಟ ಬುತ್ತಿ. ಕುಡಿಯುವುದು ಭ್ರಮೆ ಉಂಟುಮಾಡುತ್ತದೆ. ಮದ್ಯಪಾನ ದೇಹದ ಎಲ್ಲಾ ಭಾಗಗಳಿಗೆ ಹಾನಿ ಉಂಟುಮಾಡುತ್ತದೆ ಎಂದರು. ಉಡುಪಿ ಜಿಲ್ಲೆಯ 100 ಮಂದಿ ಪೊಲೀಸ್ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಸ್.ಡಿ.ಎಮ್ ಮೆಡಿಕಲ್ ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀ ಸೀತಾರಾಮ ತೋಲ್ಪಡಿತ್ತಾಯರವರು ಮಾತನಾಡಿ ಮದ್ಯ ವರ್ಜನ ಶಿಬಿರದ ಮೂಲಕ ಪೂಜ್ಯರು ವ್ಯಸನಮುಕ್ತ, ಸ್ವಸ್ಥ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ನೆನಪು ಮಾಡಿಕೊಂಡರು.ಮುಖ್ಯ ವೈದ್ಯಾಧಿಕಾರಿ ಗೋಪಾಲ ಪೂಜಾರಿ, ಪ್ರಬಂಧಕರಾದ ಶ್ರೀ ಪ್ರವೀಣ್ ಉಪಸ್ಥಿತರಿದ್ದರು.ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಸೌಖ್ಯವನದ ಸಿಬ್ಬಂದಿಗಳು ಉಪಸ್ಥಿತರಿದ್ದರು.
