ವಿಜಯಪುರ ಜಿಲ್ಲಾ ವ್ಯಾಪ್ತಿಯ ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ

Janajagurthi Vedike News

ವಿಜಯಪುರ ಜಿಲ್ಲಾ ವ್ಯಾಪ್ತಿಯ ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಕಾರ್ಯದರ್ಶಿಗಳು ಮತ್ತು ಜಿಲ್ಲಾ ನಿರ್ದೇಶಕರಾದ ಗೌರವಾನ್ವಿತ ಶ್ರೀ ಸಂತೋಷ್ ಕುಮಾರ್ ರೈ ಅವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ಯೋಜನೆಯ ಕಾರ್ಯಕ್ರಮಗಳಾದ ಮಾಶಾಸನ, ವಾತ್ಸಲ್ಯ ಮನೆ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ, ಹಿಂದೂ ರುದ್ರಭೂಮಿ ರಚನೆ, ಜ್ಞಾನದೀಪ ಶಿಕ್ಷಕರ ಕಾರ್ಯಕ್ರಮ, ಇತರೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಸವಿಸ್ತಾರವಾಗಿ ಸಭೆಗೆ ಮಾಹಿತಿ ನೀಡಿದರು ಮತ್ತು ಜಿಲ್ಲಾ ಜನಜಾಗೃತಿ ವೇದಿಕೆಯಿಂದ ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ಕುರಿತಂತೆ ಮಧ್ಯವರ್ಜನ ಶಿಬಿರಗಳನ್ನು ನಡೆಸುವ ಕುರಿತಂತೆ ವಿವರವಾಗಿ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಕಲ್ಬುರ್ಗಿ ಪ್ರಾದೇಶಿಕ ಕಚೇರಿಯ ಜನಜಾಗೃತಿ ವಿಭಾಗದ ಯೋಜನಾಧಿಕಾರಿಗಳಾದ ಶ್ರೀಯುತ ರಾಜೇಶ್ ರವರು ಮಾತನಾಡುತ್ತಾ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳು ಸುವ್ಯವಸ್ಥಿತವಾಗಿ ನಡೆಯಲು ತಮ್ಮೆಲ್ಲರ ಸಹಕಾರ ಅತಿ ಅಗತ್ಯ ಮತ್ತು ನಾವೆಲ್ಲರೂ ಒಂದು ಕುಟುಂಬದಂತೆ ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು. ಪೂಜ್ಯರ ಆಶಯದಂತೆ ಸಮಾಜಕ್ಕೆ ಉಪಯುಕ್ತವಾಗುವ ಕೆಲಸ ಕಾರ್ಯಗಳಲ್ಲಿ ನಾವೆಲ್ಲರೂ ತೊಡಗಿಕೊಳ್ಳೋಣ ಎಂದು ತಿಳಿಸಿದರು ಇದುವರೆಗೆ ಜನಜಾಗೃತಿ ವಿಭಾಗದಿಂದ ಆದಂತ ಗುರಿ ಸಾಧನೆಗಳ ಬಗ್ಗೆ ವಿಮರ್ಶೆ ಮಾಡುತ್ತಾ, ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಕುರಿತಂತೆ ಮತ್ತು ಅವುಗಳ ಗುರಿ ಸಾಧನೆ ಕುರಿತಂತೆ ಸವಿಸ್ತಾರವಾಗಿ ಸಭೆಯಲ್ಲಿ ವಿಷಯ ಮಂಡಿಸಿದರು. ವಿಜಯಪುರ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸೋಮನಗೌಡ ಪಾಟೀಲ್ ರವರು ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಡಾ.ವೀರೇಂದ್ರ ಹೆಗಡೆಯವರು ನಮ್ಮೆಲ್ಲರಿಗೂ ಸಮಾಜ ಸೇವೆ ಮಾಡಲು ಅವಕಾಶ ಒದಗಿಸಿ ಕೊಟ್ಟಿದ್ದಾರೆ. ಹಾಗಾಗಿ ಎಲ್ಲರೂ ಸ್ವ ಇಚ್ಛೆಯಿಂದ ಮತ್ತು ಸ್ವಯಂ ಪ್ರೇರಣೆಯಿಂದ ಸಂಸ್ಥೆಯ ಕೆಲಸ ಕಾರ್ಯಗಳಲ್ಲಿ ಭಾಗವಹಿಸೋಣ ಮತ್ತು ನಮ್ಮಿಂದಾದ ಸೇವೆಯನ್ನು ಮಾಡೋಣ ಎಂದು ಎಲ್ಲ ಸದಸ್ಯರಿಗೆ ಕರೆಕೊಟ್ಟರು. ಮಧ್ಯಪಾನ ಮುಕ್ತ ಚುನಾವಣೆಗಳನ್ನು ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸುವ ಅವಶ್ಯಕತೆ ಇದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು ಹಾಗೂ ಒಂದು ಗ್ರಾಮವನ್ನು ದತ್ತು ಪಡೆದು ಅದನ್ನು ಪಾನಮುಕ್ತ ಗ್ರಾಮವನ್ನಾಗಿ ಮಾಡುವ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಸಿದರು.