ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ತುಮಕೂರು-2 ಜಿಲ್ಲೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ತುಮಕೂರು-2 ಜಿಲ್ಲೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಧುಗಿರಿ ತಾಲೂಕು ಇವರ ಸಹಯೋಗದೊಂದಿಗೆ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮವು ಕುಂಚಿಟಿಗ ಒಕ್ಕಲಿಗರ ಸಂಘದ ಆವರಣ ಮಧುಗಿರಿ ಪಟ್ಟಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಶ್ರೀ ತಿಮ್ಮಯ್ಯ ನಾಯ್ಕ ರವರು ಜನಜಾಗೃತಿ ವೇದಿಕೆಯ ಹುಟ್ಟು, ಬೆಳವಣಿಗೆಯ ಬಗ್ಗೆ ಹಾಗೂ ಜನಜಾಗೃತಿ ವೇದಿಕೆಯಿಂದ ನಡೆಸಲಾಗುವ ಕಾರ್ಯಕ್ರಮಗಳ ಬಗ್ಗೆ, ಬೆಂಗಳೂರು ಪ್ರಾದೇಶಿಕ ವಿಭಾಗದಲ್ಲಿ ಇದುವರೆಗೂ ನಡೆಸಲ್ಪಟ್ಟ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳು ಹಾಗೂ ವಿಶೇಷವಾಗಿ ನವಜೀವನ ಸಮಿತಿ ಸದಸ್ಯರಿಗೆ ನೀಡುವಂತಹ ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ ಪ್ರಶಸ್ತಿಗಳ ವಿವರಣೆಯೊಂದಿಗೆ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀಗಳು ಹಾಗೂ ವೇದಿಕೆಯಲ್ಲಿ ಆಸೀನರಿದ್ದ ಗಣ್ಯಮಾನ್ಯರುಗಳು ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿದ್ದ ಶ್ರೀಗಳು ಹಾಗೂ ಭಾಗವಹಿಸಿದ್ದ ಗಣ್ಯರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಸಲ್ಪಡುವ ಮದ್ಯವರ್ಜನ ಶಿಬಿರಗಳಿಗೆ ಸೇರಿ ಪಾನಮುಕ್ತರಾದ ಆಯ್ದ ನವಜೀವನ ಸಮಿತಿ ಸದಸ್ಯರು ಮತ್ತು ಕುಟುಂಬಸ್ಥರು ಅನುಭವದ ಹಂಚಿಕೆಯನ್ನು ಮಾಡಿಕೊಂಡರು. ತುಮಕೂರು-2 ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತುಮಕೂರು-2 ಜಿಲ್ಲಾ ವ್ಯಾಪ್ತಿಯ ನವಜೀವನ ಸಮಿತಿ ಸದಸ್ಯರಿಗೆ ಗುಲಾಬಿ ಹೂ ನೀಡುವ ಮೂಲಕ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಮುರಳಿಧರ ಹಾಲಪ್ಪ ಮಾಜಿ ಅಧ್ಯಕ್ಷರು ಕೌಶಲ್ಯಾಭಿವೃದ್ಧಿ ನಿಗಮ ಕರ್ನಾಟಕ ಸರ್ಕಾರ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖೇನ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವುದು ಕೆಲವು ಕಿಡಿಗೇಡಿಗಳಿಗೆ ಅರಗಿಸಿಕೊಳ್ಳಲು ಆಗದೆ ಇರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಕಿಡಿಗೇಡಿಗಳಿಗೆ ಎಚ್ಚರಿಕೆಯನ್ನು ನೀಡಿದರು. ಸುಳ್ಳು ವದಂತಿಗಳಿಗೆ ಕಿವಿ ಕೊಡದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ನಿಕಟ ಸಂಪರ್ಕ ಸಾಧಿಸಿ ತಮ್ಮ ಜೀವನ ಉಜ್ವಲಗೊಳಿಸಿಕೊಳ್ಳುವಂತೆ ಕಿವಿ ಮಾತು ಹೇಳಿ ಶುಭ ಹಾರೈಸಿದರು. ಶ್ರೀ ಅಬ್ದುಲ್ ಖಾದರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ತುಮಕೂರು ರವರು ಮಾತನಾಡಿ ಪೊಲೀಸ್ ಇಲಾಖೆಯಿಂದ ನಡೆಸಬೇಕಾದ ಹಲವಾರು ಕಾರ್ಯಕ್ರಮಗಳನ್ನು ಮತ್ತು ಸರ್ಕಾರ ಪ್ರಮುಖವಾಗಿ ಗಮನ ಹರಿಸಬೇಕಾದ ಕೆಲವು ವಿಷಯಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ವಿಶೇಷ ಆಸಕ್ತಿಯನ್ನು ವಹಿಸಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಶ್ರಮಿಸುತ್ತಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದು ಸಂತಸವನ್ನು ವ್ಯಕ್ತಪಡಿಸಿ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು. ಶ್ರೀ ಮಂಜುನಾಥ್ ಲಾಲಾಪೇಟೆ ಅಧ್ಯಕ್ಷರು ಪುರಸಭೆ ಮಧುಗಿರಿ ಹಾಗೂ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ತುಮಕೂರು-2 ಜಿಲ್ಲೆ ರವರು ಮಾತನಾಡಿ ಪರಮಪೂಜ್ಯ ವೀರೇಂದ್ರ ಹೆಗಡೆಯವರು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಜಾರಿಗೆ ತಂದಿರುವಂತಹ ಜನಜಾಗೃತಿ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು, ಜನಜಾಗೃತಿ ವೇದಿಕೆಯಲ್ಲಿ ಸೇವೆ ಮಾಡಲು ಅವಕಾಶ ದೊರಕಿರುವುದು ನನ್ನ ಯಾವುದೋ ಜನ್ಮದ ಪುಣ್ಯವಾಗಿದೆ ಎಂದು ತಿಳಿಸುವ ಮೂಲಕ ಕಾರ್ಯಕ್ರಮದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು. ತುಮಕೂರು-2 ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ದಿನೇಶ್ ಡಿ. ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆಗಳ ಹೂಳೆತ್ತುವ ಕಾರ್ಯಕ್ರಮ, ಸುಜ್ಞಾನ ನಿಧಿ, ಹಾಲಿನ ಡೈರಿಗಳಿಗೆ ಪ್ರೋತ್ಸಾಹ ಧನ, ಧಾರ್ಮಿಕ ಕ್ಷೇತ್ರಗಳಿಗೆ ಪ್ರೋತ್ಸಾಹ ಧನ, ಕಡಿಮೆ ಬಡ್ಡಿದರದಲ್ಲಿ ಸಂಘಗಳ ಸದಸ್ಯರಿಗೆ ಸಾಲ ಸೌಲಭ್ಯಗಳು ನೀಡುತ್ತಾ ಬಂದಿದ್ದು ಜನಜಾಗೃತಿ ವೇದಿಕೆಯ ಮೂಲಕವಾಗಿ ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ತಂಬಾಕು ವಿರೋಧಿ ಕಾರ್ಯಕ್ರಮ, ಮಾದಕ ವಸ್ತು ವಿರೋಧಿ ದಿನಾಚರಣೆಗಳಂತಹ ಹಾಗೂ ಗಾಂಧೀಜಿಯವರ ಕಂಡಂತಹ ರಾಮರಾಜ್ಯದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಗಾಂಧೀಜಿಯವರ ವಿಚಾರಧಾರೆಗಳನ್ನು ಜನರಿಗೆ ಮುಟ್ಟಿಸುವ ಸದುದ್ದೇಶದಿಂದ ಗಾಂಧಿ ಸ್ಮೃತಿ ಕಾರ್ಯಕ್ರಮಗಳಂತಹ ಹತ್ತು ಹಲವರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ನವಜೀವನ ಸದಸ್ಯರು ಸ್ವಸಹಾಯ ಸಂಘಗಳ ಒಕ್ಕೂಟದ ಮಾದರಿಯಲ್ಲಿ ನವಜೀವನ ಸಮಿತಿಗಳ ಒಕ್ಕೂಟಗಳನ್ನು ರಚನೆ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಕೈ ಜೋಡಿಸಿದರೆ ಮತ್ತಷ್ಟು ಜನಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸುವ ಮೂಲಕ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು. ಶ್ರೀ ಎಂ. ಜಿ. ಶ್ರೀನಿವಾಸಮೂರ್ತಿ ಧಾರ್ಮಿಕ ಮುಖಂಡರು ಮಧುಗಿರಿ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಮಧುಗಿರಿ-2 ಯೋಜನಾ ಕಚೇರಿಯ ಯೋಜನಾಧಿಕಾರಿ ಶ್ರೀ ಶಶಿಧರ್ ರವರು ಜಿಲ್ಲಾಧಿಕಾರಿಗಳ ಮುಖೇನವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ನೀಡಲ್ಪಡುವ ದುಶ್ಚಟ ಮತ್ತು ಸ್ವಾಸ್ಥ್ಯ ಸಮಾಜಕ್ಕೆ ಪೂರಕವಾದ ಮಾಹಿತಿಗಳನ್ನೊಳಗೊಂಡಂತಹ ಠರಾವು ಮಂಡಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಶ್ರೀ ಶ್ರೀ ಡಾ| ಹನುಮಂತನಾಥ ಸ್ವಾಮೀಜಿ ಕುಂಚಿಟಿಗರ ಮಹಾಸಂಸ್ಥಾನ ಮಠ ಎಲೆರಾಂಪುರ ರವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದಂತಹ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸರ್ಕಾರ ಮಾಡಬೇಕಾದಂತಹ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವುದು ಸಾಮಾನ್ಯವಾದ ವಿಷಯವಲ್ಲ. ಈ ಒಂದು ಮಹತ್ತರವಾದ ಕಾರ್ಯಕ್ರಮಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳು ಹೊರತು ಬೇರಾರು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಪ್ರಮುಖವಾಗಿ ಸರ್ವ ಧರ್ಮ ಸಮಾನತೆಯನ್ನು ಕಾಯ್ದುಕೊಂಡು ಬಂದಂತಹ ಧಾರ್ಮಿಕ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಯಾವುದಾದರು ಸಂಘ-ಸಂಸ್ಥೆಗಳಲ್ಲಿ ಸರ್ವ ಧರ್ಮ ಸಮಾನತೆಯನ್ನು ಕಾಣಬೇಕಾದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮಾತ್ರ ಎಂದು ತಿಳಿಸಿ ಸಂತೋಷವನ್ನು ವ್ಯಕ್ತಪಡಿಸಿದರು. ಸಮಾಜದ ಮಾರಕವಾದ ಮದ್ಯಪಾನದ ವಿರುದ್ಧ ಹೋರಾಟ ಮಾಡಿ ಮದ್ಯ ವ್ಯಸನಿಗಳನ್ನ ಮದ್ಯವರ್ಜನ ಶಿಬಿರಗಳ ಮೂಲಕ ಮನಃಪರಿವರ್ತನೆ ಮಾಡಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳನ್ನಾಗಿಸುವಂತಹ, ವ್ಯಸನಮುಕ್ತ ಸಾಧಕರನ್ನು ಗುರುತಿಸಿ ಸನ್ಮಾನವನ್ನು ಮಾಡುವಂತಹ ಮಹತ್ತರ ಕಾರ್ಯವನ್ನು ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಹೆಗ್ಗಡೆಯವರಿಗೆ ಇನ್ನಷ್ಟು ಹೆಚ್ಚಿನ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ತಿಳಿಸುವ ಮೂಲ ಆಶೀರ್ವಚನವನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತುಮಕೂರು-2 ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ರಾಮಚಂದ್ರ ಗುಪ್ತಾರವರು ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ತುಮಕೂರು-2 ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ತುಮಕೂರು-2 ಜಿಲ್ಲಾ ಕಚೇರಿ ವ್ಯಾಪ್ತಿಯ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಮಧುಗಿರಿ-1 ಮತ್ತು ಮಧುಗಿರಿ-2 ಯೋಜನಾ ಕಚೇರಿಗಳ ಆಂತರಿಕಲೆಕ್ಕ ಪರಿಶೋಧಕರು/ಜ್ಞಾನವಿಕಾಸ ಸಮನ್ವಯಾಧಿಕಾರಿ, ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಮೇಲ್ವಿಚಾರಕರು, ತುಮಕೂರು-2 ಜಿಲ್ಲೆಯ ಆಡಿಟ್ ಪ್ರಬಂಧಕರು, ಸೇವಾ ಪ್ರತಿನಿಧಿಗಳು, ತುಮಕೂರು-2 ಜಿಲ್ಲಾ ವ್ಯಾಪ್ತಿಯ ನವಜೀವನ ಸಮಿತಿ ಸದಸ್ಯರು ಹಾಗೂ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
