ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಕೋಲಾರ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಕೋಲಾರ ಯೋಜನಾ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಗಣ್ಯಮಾನ್ಯರನ್ನು ಕೋಲಾರ ಯೋಜನಾ ಕಛೇರಿಯ ಮಾನ್ಯ ಯೋಜನಾಧಿಕಾರಿ ಶ್ರೀ ಸಿದ್ದಗಂಗಯ್ಯ ಟಿ.ಎಸ್. ರವರು ಸ್ವಾಗತಿಸಿದರು. ವೇದಿಕೆಯಲ್ಲಿ ಆಸೀನರಿದ್ದ ಗಣ್ಯರುಗಳು ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಗೌರವಾನ್ವಿತ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಶೀನಪ್ಪ ಎಂ. ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕರ್ನಾಟಕದ ಪರಿವರ್ತನೆಯ ರುವಾರಿ ಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೆ ಆದಂತಹ ಕೊಡುಗೆಯನ್ನು ಕೊಟ್ಟಂತಹ ಕ್ಷೇತ್ರ ಧರ್ಮಸ್ಥಳ. ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಾಂಧೀಜಿಯವರು ಕಂಡಂತಹ ರಾಮರಾಜ್ಯದ ಕನಸನ್ನು ಪೂಜ್ಯರ ಪ್ರೀತಿಯ ಕಾರ್ಯಕ್ರಮವಾದ ಜನಜಾಗೃತಿ ವೇದಿಕೆಯ ಮೂಲಕ ಪೂಜ್ಯರು ನನಸು ಮಾಡುತ್ತಿದ್ದಾರೆ. ಜನಜಾಗೃತಿ ವೇದಿಕೆಯ ಮುಖೇನ ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ದುಶ್ಚಟಮುಕ್ತ ಸಮಾಜ ನಿರ್ಮಾಣದ ಬಗ್ಗೆ ಅರಿವು ಮೂಡಿಸುವ ಮೂಲಕ ಜಾಗೃತರನ್ನಾಗಿಸುವ ಪರಿಣಾಮಕಾರಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿರುವುದು ಸಮಾಜಕ್ಕೆ ಪೂಜ್ಯರು ನೀಡಿರುವ ದೊಡ್ಡ ಕೊಡುಗೆ ಆಗಿದೆ ಎಂದು ತಿಳಿಸಿದರು. ಜನಜಾಗೃತಿ ವೇದಿಕೆಯ ಸದಸ್ಯರುಗಳು ಎಲ್ಲಾ ರಂಗಗಳಲ್ಲಿರುವವರು ಇದ್ದಾರೆ. ಸಮಾಜಕ್ಕೆ ಸಾಮಾಜಿಕ ಮತ್ತು ಆರ್ಥಿಕ, ಧಾರ್ಮಿಕ, ಶೈಕ್ಷಣಿಕವಾಗಿ ಬಹುದೊಡ್ಡ ಕೊಡುಗೆ ಕೊಟ್ಟಂತಹ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ. ಪೂಜ್ಯರು ಯೋಜನೆಯ ಮೂಲಕ, ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಸುಮಾರು 58 ಲಕ್ಷ ಮಂದಿ ಸ್ವಸಹಾಯ ಸಂಘದ ಮೂಲಕ ಆರ್ಥಿಕ ಸಬಲೀಕರಣದಲ್ಲಿ ಮುಂಚೂಣಿಯಲ್ಲಿದ್ದು ಸ್ವಾಭಿಮಾನದಿಂದ ಬದುಕಲು ಸಾದ್ಯವಾಗಿದೆ. ಪೂಜ್ಯ ಹೆಗ್ಗಡೆಯವರು ಸಮಾಜಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಪ್ರಮುಖವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಅನುಧಾನ, ಹೈನುಗಾರಿಕೆ ಅನುಧಾನ, ಶೈಕ್ಷಣಿಕ ಕ್ಷೇತ್ರಕ್ಕೆ ಅನುಧಾನ ಹೀಗೆ ಸ್ವಸಹಾಯ ಸಂಘಗಳ ಆರ್ಥಿಕ ಯೋಜನೆ ಅಲ್ಲದೆ ಸಮಾಜಕ್ಕೆ ತನ್ನದೆ ಆದಂತಹ ಕೊಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು. ಸರ್ವಧರ್ಮಗಳ ಪವಿತ್ರ ತಾಣ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕ್ರಾಂತಿಕಾರಿ ಯೋಜನೆಗಳ ಮೂಲಕ ರಾಜ್ಯದ ಮಹಿಳೆಯರ ಬಗ್ಗೆ ಸದಾ ಚಿಂತನೆಯನ್ನು ಮಾಡುವವರು ವಾತ್ಸಲ್ಯಮಯಿ ಮಾತೃಶ್ರೀ ಡಾ| ಹೇಮಾವತಿ ವಿ.ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವಿಶ್ವಕ್ಕೆ ಮಾದರಿಯಾಗಿ ಬಡತನ ನಿರ್ಮೂಲನೆಗಾಗಿ ಕ್ರಾಂತಿಕಾರಿ ಯೋಜನೆಗಳ ರುವಾರಿಗಳಾದ ಪೂಜ್ಯ ಹೆಗ್ಗಡೆಯವರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಸಮಾಜದ ಮುನ್ನೆಲೆಗೆ ತರುವ ವ್ಯವಸ್ಥೆಯನ್ನು ಮಾಡಿದ್ದಾರೆಂದು ತಿಳಿಸಿದರು. ನಿರ್ಗತಿಕ ವೃದ್ಧರನ್ನು ಗುರುತಿಸಿ ರಾಜ್ಯಾದ್ಯಂತ ಸುಮಾರು 18,000 ಮಂದಿಗೆ ಮಾಸಿಕ ಖರ್ಚಿಗಾಗಿ ಮಾಶಾಸನವನ್ನು ನೀಡುತ್ತಿದ್ದು, ಗುಡಿಸಲಿನಲ್ಲಿ ವಾಸ ಮಾಡುತ್ತಿರುವ ನಿರ್ಗತಿಕರನ್ನು ಗುರುತಿಸಿ ವಾತ್ಸಲ್ಯ ಯೋಜನೆಯಡಿ ಮನೆಯನ್ನು ರಚನೆ ಮಾಡಿ ದಿನನಿತ್ಯದ ಕುಟುಂಬ ನಿರ್ವಹಣೆಗೆ ಬೇಕಾದಂತಹ ಪರಿಕರಗಳನ್ನು ನೀಡುವ ಮೂಲಕ ಸರ್ಕಾರ ಮಾಡದ ಕೆಲಸವನ್ನು ಯೋಜನೆಯ ಮೂಲಕ ಪೂಜ್ಯರು ಮತ್ತು ಮಾತೃಶ್ರೀ ಅಮ್ಮನವರು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಕೋಲಾರ ಜಿಲ್ಲಾ ಜನಜಾಗೃತಿ ವೇದಿಕೆಯ ಸಹಭಾಗಿತ್ವದಲ್ಲಿ ತಾಲೂಕಿನ ಜ್ವಾಲಾಂತ ಸಮಸ್ಯೆಗಳನ್ನು ಗಮನಕ್ಕೆ ತಂದಲ್ಲಿ ಜ್ಞಾನವಿಕಾಸ ಕಾರ್ಯಕ್ರಮಗಳ ಅಡಿಯಲ್ಲಿ ಅನುಷ್ಠಾನ ಮಾಡಬಹುದು. ಜ್ವಾಲಂತ ಸಮಸ್ಯೆಗಳ ಬಗ್ಗೆ ನಾಟಕ ರೂಪಕದಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ತಿಳಿಸಿದರು. ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವನ್ನು ಪಡೆಯುತ್ತಿರುವ ಸಂಘದ ಸದಸ್ಯರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸುಜ್ಞಾನ ನಿಧಿ ಶಿಷ್ಯ ವೇತನದಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಪೂಜ್ಯರು ನೀಡಿದ್ದಾರೆ. ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಪೂಜ್ಯರ ಸೇವಾ ಮಾದರಿ ಕಾರ್ಯಗಳು ಜಾಗತಿಕ ಮಟ್ಟಕ್ಕೆ ತಲುಪುವ ಮೂಲಕ ಮಹಿಳಾ ಸಬಲೀಕರಣಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು. ಪೂಜ್ಯರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಯಕ್ರಮ ಒಂದು ವಿಶಿಷ್ಟವಾದ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮದ ಪಲಶ್ರುತಿಯಿಂದ ರಾಜ್ಯಾದ್ಯಂತ ಸುಮಾರು 1800 ಮಧ್ಯವರ್ಜನ ಶಿಬಿರಕ್ಕೆ ಸೇರಿ ಸುಮಾರು ಒಂದು ಲಕ್ಷದ ಐವತ್ತು ಸಾವಿರ ಮಂದಿ ನೆಮ್ಮದಿಯ ಜೀವನವನ್ನು ನಡೆಸುತ್ತ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ತಿಳಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಹಾಗೂ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣವಾಗಿ ತಿಳಿಸುವ ಮೂಲಕ ಪೂಜ್ಯರ ಆದರ್ಶ ವ್ಯಕ್ತಿತ್ವ ನಮಗೆ ಮಾರ್ಗದರ್ಶನವಾಗಿದೆ ಎಂದು ತಿಳಿಸಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ವಾಸುದೇವ್ ರವರು ನಾವು ಸೇರಿರುವ ಮುಖ್ಯ ಉದ್ದೇಶ ಸಮಾಜ ಸೇವೆಗಾಗಿ. ಸೇವೆ ನಮ್ಮ ಮುಖ್ಯ ಗುರಿ ಎಂದು ತಿಳಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು.
