ಧಾರವಾಡದ ರುಡ್ಸೆಟ್ ಸಂಸ್ಥೆಯಲ್ಲಿ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ನವಜೀವನ ಸದಸ್ಯರಿಗೆ ಹತ್ತು ದಿನಗಳ ಕುರಿ ಮತ್ತು ಆಡು ಸಾಕಾಣಿಕೆಯ ತರಬೇತಿ ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ರಾಜಣ್ಣ ಮೂ. ಕೊರವಿ ಯವರು ಉದ್ಘಾಟಿಸಿ ಧರ್ಮಸ್ಥಳದ ಪೂಜ್ಯ ಹೆಗ್ಗಡೆಯವರು ಸಮಾಜವನ್ನು ತಿದ್ದುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದು ಅವುಗಳನ್ನು ವರ್ಣಿಸಲು ಅಸಾಧ್ಯ ಎಂದು ನವಜೀವನ ಸದಸ್ಯರಾದ ನೀವು ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಒಳ್ಳೆಯ ಸಾಧಕರ ಸಾಲಿಗೆ ಸೇರಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಗವಿಸಿದ್ದಪ್ಪ ಕಟ್ಟಿಮನಿ ಯವರು ವಹಿಸಿದರು. ಅಧ್ಯಕ್ಷೀಯ ಮಾತುಗಳನ್ನಾಡಿದ ಗವಿಸಿದ್ದಪ್ಪ ಕಟ್ಟಿಮನಿ ಯವರು ನವಜೀವನ ಸದಸ್ಯರಿಗೆ ನಡೆಯುತ್ತಿರುವ ಸ್ವಉದ್ಯೋಗ ತರಬೇತಿ ವರದಿ ವರ್ಷದ ಎರಡನೇ ತರಬೇತಿಯಾಗಿದ್ದು ಇಲ್ಲಿಯವರೆಗೆ ಒಟ್ಟು 14 ತರಬೇತಿ ನಡೆಸಲಾಗಿದೆ. ಕುರಿ ಮತ್ತು ಆಡುಗಳು ಚಲಿಸುವ ಎಟಿಎಂ ಎಂಬ ಹೆಸರಿನಿಂದ ಕರೆಯಲ್ಪಟ್ಟು ಲಾಭದಾಯಕ ಉದ್ಯೋಗವಾಗಿದೆ ತರಬೇತಿ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ತೊಡಗಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಪ್ರಾಸ್ತಾಯಕವಾಗಿ ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ರವರು ತರಬೇತಿಯಲ್ಲಿ ನವಜೀವನ ಸದಸ್ಯರು ತೊಡಗಿಸಿಕೊಳ್ಳಬೇಕಾದ ರೀತಿ ಹಾಗೂ ತರಬೇತಿಯ ಉದ್ದೇಶ, ಪೂಜ್ಯರು ಮತ್ತು ಯೋಜನೆಯ ಆಶಯ, ಜನಜಾಗೃತಿ ವೇದಿಕೆಯಿಂದ ನೀಡುತ್ತಿರುವ ಪ್ರೇರಣೆಯ ಬಗ್ಗೆ ತಿಳಿಸಿ, ರುಡ್ಸೆಟ್ ಸಂಸ್ಥೆಯ ಸಹಕಾರವನ್ನು ಸ್ಮರಿಸಿದರು.
