ಧಾರವಾಡ ಜಿಲ್ಲಾ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ವೇದಿಕೆ ಪದಾಧಿಕಾರಿಗಳ ಸಭೆಯನ್ನು ಜಿಲ್ಲಾಧ್ಯಕ್ಷರಾದ ಸಂತೋಷ್ ಆರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯನ್ ರವರು ಪ್ರಾದೇಶಿಕ ವ್ಯಾಪ್ತಿಯಲ್ಲಿ ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನವಾಗುತ್ತಿರುವ ರೀತಿ ಜನಜಾಗೃತಿ ಸದಸ್ಯರು ನೀಡುತ್ತಿರುವ ಸಹಕಾರ ಗಳನ್ನು ಸ್ಮರಿಸಿ ಶುಭ ಹಾರೈಸಿ, ಮುಂದಿನ ದಿನಗಳಲ್ಲಿ ಜನಜಾಗೃತಿ ವೇದಿಕೆಯ ಬಲವರ್ಧನೆಗೆ ತಾಲೂಕಿಗೆ ಐದು ಮಂದಿ ಸದಸ್ಯರಿರುವಂತೆ ನೋಡಿಕೊಂಡು ಸಮಾಜಮುಖಿ ಚಿಂತನೆ ಇರುವ ಹಾಗೂ ಜನಜಾಗೃತಿ ವೇದಿಕೆಯ ಮಾನದಂಡಗಳಿಗೆ ಯೋಗ್ಯವಾಗಿರುವ ವ್ಯಕ್ತಿಗಳನ್ನು ಆಯ್ಕೆ ಮಾಡುವಂತೆ ತಿಳಿಸಿ, ವಿಪತ್ತು ನಿರ್ವಹಣೆ, ಕೆರೆ ಮತ್ತು ಶುದ್ಧಗಂಗ ಘಟಕ ಸ್ಥಾಪನೆ, ಅಕ್ಟೋಬರ್ 2ರ ಅಂಗವಾಗಿ ನಡೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಪೂರಕವಾದ ಮಾಹಿತಿ ನೀಡಿದರು. ರಾಜ್ಯಾಧ್ಯಕ್ಷರಾದ ರಾಜಣ್ಣ ಕೊರವಿ ಅವರು ರಾಜ್ಯಾದ್ಯಂತ ಯಶಸ್ವಿಗೊಳ್ಳುತ್ತಿರುವ ಜನಜಾಗೃತಿಯ ಅಭಿಯಾನವನ್ನು ಸಭೆಯಲ್ಲಿ ವಿವರಿಸಿ, ಧಾರವಾಡ ಜಿಲ್ಲಾ ವ್ಯಾಪ್ತಿಯ ಕಾರ್ಯಕ್ರಮಗಳು ರಾಜ್ಯದ ಇತರ ಜಿಲ್ಲೆಗಳಿಗೆ ಮಾದರಿಯಾಗುವ ರೀತಿಯಲ್ಲಿ ನಡೆದಾಗ ಧಾರವಾಡ ಪ್ರಾದೇಶಿಕ ವ್ಯಾಪ್ತಿಗೆ ಪೂಜ್ಯರು ನೀಡಿದ ಅಧ್ಯಕ್ಷ ಹುದ್ದೆಗೆ ಗೌರವ ಪ್ರಾಪ್ತಿಯಾಗುತ್ತದೆ ಎಂದು ಬಣ್ಣಿಸಿ, ಕ್ಷೇತ್ರದ ಮೇಲೆ ಮತ್ತು ಪೂಜ್ಯರ ಮೇಲೆ ಕೆಲವೊಂದು ಕಿಡಿಗೇಡಿಗಳು ಹಬ್ಬಿಸುತ್ತಿರುವ ವದಂತಿಗಳು ಸುಳ್ಳಾಗಿದ್ದು ಅದನ್ನು ಖಂಡಿಸಿದರಲ್ಲದೆ ಕೆಲವೇ ದಿನಗಳಲ್ಲಿ ಅದು ಸಮಾಜದ ಮುಂದೆ ಬೆತ್ತಲಾಗಲಿದೆ ಎಂದು ತಿಳಿಸಿ. ಜನಜಾಗೃತಿ ಸದಸ್ಯರಾದ ತಾವುಗಳು ತಮ್ಮಲ್ಲಿ ಯಾರಾದರೂ ಈ ಬಗ್ಗೆ ಚರ್ಚಿಸಿದ್ದಲ್ಲಿ ಅಂತವರಿಗೆ ಸೂಕ್ತ ಮಾಹಿತಿಯನ್ನು ನೀಡಿ ಅವರನ್ನ ನಮ್ಮ ಪರವಾಗಿ ಮಾಡಿಕೊಳ್ಳುವಂತಹ ಜವಾಬ್ದಾರಿ ಜನಜಾಗೃತಿ ಸದಸ್ಯರಾದ ನಮ್ಮ ಕರ್ತವ್ಯವೆಂದರು. ಈ ಸಂದರ್ಭದಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು
1. ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಬಗ್ಗೆ.
2. ಜನಜಾಗೃತಿ ಕಾರ್ಯಕ್ರಮಗಳಲ್ಲಿ ಮತ್ತು ಯೋಜನೆಯ ಕಾರ್ಯಕ್ರಮಗಳಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರನ್ನು ಆಹ್ವಾನಿಸುವುದು.
3. ವಕೀಲರು, ವೈದ್ಯರು, ಸಮಾಜ ಸೇವಕರು, ಉತ್ತಮ ಚಾರಿತ್ರ್ಯ ಇರುವಂತಹ ಸದಸ್ಯರನ್ನು ಜನಜಾಗೃತಿ ವೇದಿಕೆಗೆ ಸೇರ್ಪಡೆಗೊಳಿಸುವುದು.
4. ಜನಜಾಗೃತಿ ವೇದಿಕೆಯ ಸದಸ್ಯರನ್ನೋಳಗೊಂಡ ನಿಯೋಗ ಶ್ರೀ ಕ್ಷೇತ್ರ ಧರ್ಮಸ್ಥಳದ ಸಂದರ್ಶನ ಮಾಡಿ ಸ್ವಾಮಿಯ ದರ್ಶನ ಪೂಜ್ಯರ ಭೇಟಿ, ಯೋಜನೆಯ ಕೇಂದ್ರ ಕಚೇರಿ ಹಾಗೂ ಅಧಿಕಾರಿಗಳ ಭೇಟಿ ಮಾಡುವುದು.
5. ಅಕ್ಟೋಬರ್ 2 ಗಾಂಧಿ ಜಯಂತಿಯನ್ನು ಪರಿಣಾಮಕಾರಿಯಾಗಿ ಧಾರವಾಡದಲ್ಲಿ ನಡೆಸುವುದು.
6. ಅಕ್ಟೋಬರ್ ಕಾರ್ಯಕ್ರಮದ ಯಶಸ್ಸಿಗೆ ಅನುದಾನದ ಜೊತೆಗೆ ಜನಜಾಗೃತಿ ಸದಸ್ಯರು ಭರಿಸುವುದು.
7. ಅಕ್ಟೋಬರ್ ಎರಡರ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಹೆಚ್ಚಿನ ಪುರುಷರು ಭಾಗವಹಿಸುವಂತೆ ನೋಡಿಕೊಳ್ಳುವುದು.
ಸಭೆಯನ್ನ ಬಹಳ ಉತ್ತಮವಾಗಿ ಸಂಘಟಿಸಿ ಜಿಲ್ಲಾ ನಿರ್ದೇಶಕರಾದ ಪ್ರದೀಪ್ ಶೆಟ್ಟಿಯವರು ಎಲ್ಲರನ್ನು ಸ್ವಾಗತಿಸಿ, ಧನ್ಯ ವಾದ ಅರ್ಪಿಸಿದರು, ಜಿಲ್ಲಾ ವ್ಯಾಪ್ತಿಯ ಏಳು ಮಂದಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದು ಸಾಧನೆಯ ವರದಿ ಮಂಡಿಸಿದರು. ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಸಭೆಯನ್ನ ನಿರೂಪಿಸಿ ಸಂದರ್ಭಕ್ಕೆ ಪೂರಕವಾಗಿ ಮಾಹಿತಿ ನೀಡಿದರು. ಜಿಲ್ಲಾ ಕಚೇರಿ ವ್ಯವಸ್ಥಾಪಕರಾದ ಗಣೇಶ್ ಸಹಕರಿಸಿದರು.
