ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ದಕ್ಷಿಣ ಇದರ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಕಾರ್ಯಗಾರ ಬಂಟ್ವಾಳ ತಾಲೂಕಿನ ಉನ್ನತಿ ಸೌಧ ಸಭಾಂಗಣದಲ್ಲಿ ನಡೆಯಿತು. ಕಾರ್ಯಗಾರವನ್ನು ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಶ್ರೀಮತಿ ಶಾರದಾ ರೈ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾದ ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯಸ್ ರವರು ಮದ್ಯವ್ಯಸನ, ಗುಟ್ಕಾ, ಧೂಮಪಾನಗಳಿಂದ ಯುವ ಜನತೆಯ ಜೀವನ ಹಾಳಾಗುತ್ತಿದೆ. ಸಹವಾಸ ದೋಷ, ಆಕಸ್ಮಿಕ ಆಕರ್ಷಣೆಗಳ ಕಾರಣ ದುಶ್ಚಟ ಒಮ್ಮೆ ಆರಂಭವಾದರೆ ಬದುಕು ವಿನಾಶದ ಹಾದಿಯಲ್ಲಿ ಸಾಗುತ್ತದೆ ಇದರಿಂದ ವೈಯಕ್ತಿಕ ಜೀವನದ ಜೊತೆ ಜೊತೆಗೆ ಸಮಾಜದ ಸ್ವಾಸ್ಥ್ಯ ಸಹ ಹಾಳಾಗುತ್ತದೆ ಎಂದು ವಿವರಿಸಿದರು. ವಿದ್ಯಾರ್ಥಿ ಜೀವನದ ದೆಸೆಯಿಂದಲೇ ಉತ್ತಮ ಕ್ರಿಯಾಶೀಲ ಹವ್ಯಾಸಗಳನ್ನು ರೂಢಿಸಿಕೊಂಡು ಉತ್ತಮ ಸಮಾಜ ಕಟ್ಟುವ ಕಾರ್ಯಕ್ರಮಕ್ಕೆ ದೃಢ ಸಂಕಲ್ಪ ಕೈಗೊಳ್ಳಬೇಕು ಇದಕ್ಕೆ ನಾವೆಲ್ಲರೂ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸಬೇಕು ಎಂದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಶ್ರೀ ದಿನೇಶ್, ಶ್ರೀ ಬಾಬು ನಾಯ್ಕ, ಶ್ರೀ ಮಹಾಬಲ ಕುಲಾಲ್, ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ರೋನಾಲ್ಡ್ ಡಿಸೋಜ, ಶ್ರೀ ಲೋಕನಾಥ್ ಅಮೆಚೂರ್, ಶ್ರೀ ಮಹೇಶ್ ಕೆ. ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ದಕ್ಷಿಣ ಕನ್ನಡ 1 ಮತ್ತು ದಕ್ಷಿಣ ಕನ್ನಡ 2 ಜಿಲ್ಲೆಯ ತರಬೇತುದಾರರು, ಕ್ಷೇತ್ರ ಯೋಜನಾಧಿಕಾರಿಗಳು ಭಾಗವಹಿಸಿದ್ದರು.
