ತಿಪಟೂರು ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ 153ನೇ ಗಾಂಧಿ ಸ್ಮೃತಿ ಹಾಗೂ ಜನಜಾಗೃತಿ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶ್ರೀ ವೀರೇಂದ್ರ ಹೆಗ್ಗಡೆಯವರು ಸಮಾಜದ ಅನೇಕ ವಿಭಾಗಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಛಾಪನ್ನು ಮೂಡಿಸಿದ್ದು ಮಹಿಳಾ ಸಬಲೀಕರಣ, ಕೃಷಿ, ಹೈನುಗಾರಿಕೆ, ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಹಾಗೂ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ಸಹಕಾರಿಯಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪ್ರತಾಪ್ ಸಿಂಗ್ ಅಭಿಪ್ರಾಯಪಟ್ಟರು.ತಿಪಟೂರು ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ 153ನೇ ಗಾಂಧಿ ಸ್ಮೃತಿ ಹಾಗೂ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನೆಯ ತಿಪಟೂರು ಯೋಜನಾಧಿಕಾರಿ ಉದಯ್ ಮಾತನಾಡಿ ಇಂದು ತಿಪಟೂರಿನಲ್ಲಿ ಸುಮಾರು 3000ಕ್ಕೂ ಹೆಚ್ಚು ಪ್ರಗತಿಬಂಧು ಸ್ವಸಹಾಯ ಸಂಘಗಳಿದ್ದು ಸುಮಾರು 107 ಕೋಟಿಯಷ್ಟು ಆರ್ಥಿಕ ವ್ಯವಹಾರ ಪಾರದರ್ಶಕವಾಗಿ ನಡೆಯುತ್ತಿದೆ ಅದಲ್ಲವೇ ಕೃಷಿ, ಹೈನುಗಾರಿಕೆ, ದೇವಸ್ಥಾನಗಳ ಜೀರ್ಣೋದ್ದಾರ, ಹಾಲಿನ ಡೈರಿ ಗಳ ಅಭಿವೃದ್ಧಿ, ಹಾಗೂ ಕೆರೆಗಳ ಹೂಳೆತ್ತುವಿಕೆ ಇನ್ನು ಮುಂತಾದ ಸಮಾಜಮುಖಿ ಕೆಲಸಗಳನ್ನು ಯೋಜನೆಯ ಮೂಲಕ ಶ್ರೀ ಹೆಗ್ಗಡೆಯವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುತ್ತಿದ್ದಾರೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಪ್ರಾಸ್ತಾವಿಕತೆಯ ಮಾತುಗಳನ್ನಾಡಿದರು.ಹೊನ್ನವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮದ್ಯವರ್ಜನ ಶಿಬಿರ ಕಳೆದ ಬಾರಿ ಹೊನ್ನವಳ್ಳಿಯಲ್ಲಿ ನಡೆದಿದ್ದು ಅವರ ನಿರಂತರ ಅನುಪಾಲನೆಯಿಂದ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳು ಮಧ್ಯಪಾನ ಮುಕ್ತ ಜೀವನ ನಡೆಸುತ್ತಿದ್ದು ಇದು ನಮ್ಮ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿ ಗಣೇಶ ಆಚಾರ್ಯ ಮಾತನಾಡಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆ ಇವರ ಸಮ್ಮುಖದಲ್ಲಿ 1600 ಮಧ್ಯವರ್ಜನ ಶಿಬಿರಗಳನ್ನು ನಡೆಸಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಮದ್ಯಪಾನದಿಂದ ಮುಕ್ತರಾಗಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿ ಶಾಂತಿಯುತ ಜೀವನ ನಡೆಸುತ್ತಿದ್ದಾರೆ.ಮಹಾತ್ಮ ಗಾಂಧೀಜಿಯವರ ಸಂದೇಶದಂತೆ ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತವು ದೇಹ ಮತ್ತು ಮನಸ್ಸನ್ನು ಎರಡನ್ನೂ ನಾಶಮಾಡುತ್ತದೆ ಎಂದು ಮದ್ಯಪಾನ ವಿರೋಧಿ ಘೋಷಣೆ ಕೂಗುವ ಮೂಲಕ ಮದ್ಯಪಾನ ತ್ಯಜಿಸಿದ ಸದಸ್ಯರನ್ನು ಪ್ರೇರೇಪಿಸಿದರು.ಸಂದರ್ಭದಲ್ಲಿ 1518 ನೇ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುಟ್ಟ ಶಂಕರಪ್ಪ, ಮಲ್ಲಿಗೆಪ್ಪ ಆಚಾರ್, ಅರಸು ಸಮುದಾಯ ಭವನದ ಲೋಕೇಶ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚಂದ್ರಕಾಂತ್, ಕಾಶೀ ವಿಶ್ವನಾಥ್, ಷಣ್ಮುಕಪ್ಪ ಗ್ರಾಪಂ ಸದಸ್ಯ ಪ್ರಸಾದ್, ವಲಯದ ಮೇಲ್ವಿಚಾರಕಿ ಚೂಡಾರತ್ನ ತಿಪಟೂರು ತಾಲೂಕಿನ ಎಲ್ಲಾ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ನವಜೀವನ ಸಮಿತಿಯ ಸದಸ್ಯರುಗಳು ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು.