ದಿನಾಂಕ 01.10.2017 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಾರ್ಕಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಕಳ ತಾಲೂಕು ಜಂಟಿ ಸಹಕಾರದೊಂದಿಗೆ ಅಕ್ಟೋಬರ್ 2 ರ ಗಾಂಧೀ ಜಯಂತಿ ಪ್ರಯುಕ್ತ ಜನಜಾಗೃತಿ ಸಮಾವೇಶ ಮತ್ತು ಪಾನಮುಕ್ತರ ಅಭಿನಂದನಾ ಕಾರ್ಯಕ್ರಮವನ್ನು ಬೈಲೂರು ವಲಯದ ಸರಕಾರಿ ಪದವಿ ಪೂರ್ವ ಕಾಲೇಜು ಹಾಲ್ಡಿಂಗ್ ಸಭಾಭವನದಲ್ಲಿ ನಡೆಸಲಾಯಿತು. ಶ್ರೀ ವಿ. ಸುನೀಲ್ ಕುಮಾರ್ ಮಾನ್ಯ ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿ ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಮದ್ಯಪಾನದ ಮಾರಾಟದ ಲಾಭಕ್ಕಿಂತ ಈ ಕಾರಣದಿಂದ ಉಂಟಾಗುವ ಅನಾರೋಗ್ಯದ ಕಾರಣದ ಖರ್ಚುಗಳೇ ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ ಪಾನ ನಿಷೇದದ ಕುರಿತು ಗಂಭೀರ ಚಿಂತನೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜನಜಾಗೃತಿ ಸಮಿತಿಯ ಒತ್ತಾಯವನ್ನು ಬಿಜೆಪಿಯ ರಾಜ್ಯ ಸಮಿತಿಗೆ ತಿಳಿಸಿ ಪೂರ್ಣ ಪಾನ ನಿಷೇದವನ್ನು ಜಾರಿಗೊಳಿಸಲು ಪ್ರಸ್ತಾವವನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸುವ ಬಗ್ಗೆ ರಾಜ್ಯ ನಾಯಕರಲ್ಲಿ ಚರ್ಚಿಸುವುದಾಗಿ ತಿಳಿಸಿದರು. ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್ ಹೆಚ್. ಮಂಜುನಾಥ್‍ರವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ಸಮಿತಿ ಮದ್ಯಪಾನ ತ್ಯಜಿಸಲು ಪ್ರೇರಣೆ ನೀಡಿದೆ. ಮದ್ಯವರ್ಜನ ಶಿಬಿರ ಮೂಲಕ ಜಾಗೃತಿ ಮೂಡಿಸಿದೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಯಾವ ರಾಜಕೀಯ ಪಕ್ಷ ಪಾನ ನಿಷೇದಕ್ಕೆ ಬದ್ದತೆ ವ್ಯಕ್ತಪಡಿಸುತ್ತದೋ ಅಂತಹ ಪಕ್ಷಕ್ಕೆ ನಮ್ಮ ಬೆಂಬಲ ಇದೆ ಎಂದರು. ಮಾಜಿ ಶಾಸಕರಾದ ಎಚ್ ಗೋಪಾಲ ಭಂಡಾರಿಯವರು ಪಾನಮುಕ್ತರನ್ನು ಅಭಿನಂದಿಸಿದರು. ಕಾರ್ಕಳ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಕಮಲಾಕ್ಷ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ತಾ.ಪಂ ಅಧ್ಯಕ್ಷೆ ಮಾಲಿನಿ ಜೆ ಶೆಟ್ಟಿ, ಬೈಲೂರು ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಹಾಗೂ ಕೇಂದ್ರ ಸಮಿತಿ ಅಧ್ಯಕ್ಷರಾದ ಜಯಕುಮಾರ್ ಜೈನ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕರವರು ಉಪಸ್ಥಿತರಿದ್ದರು. ಬೆಳಿಗ್ಗೆ 9.30 ಕ್ಕೆ ಬೈಲೂರು ಪಳ್ಳಿ ಕ್ರಾಸ್ ನಿಂದ ಕಾಲೇಜು ಸಭಾಭವನದವರೆಗೆ ಜಾಥಾ ಜನಜಾಗೃತಿ ಜಾಥಾ ನಡೆಯಿತು. ನೀರೆ ಬೈಲೂರು ಗ್ರಾಂ ಪಂ. ಅಧ್ಯಕ್ಷರಾದ ಸದಾನಂದ ಪ್ರಭು ಜಾಥಾ ಉದ್ಘಾಟಿಸಿದರು. ಯೋಜನಾಧಿಕಾರಿ ಕೃಷ್ಣ ಟಿ ಯವರು ಸ್ವಾಗತಿಸಿ, ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ವಿಕ್ರಂ ಹೆಗ್ಡೆ ವಂದಿಸಿದರು.