ಬೆಳ್ತಂಗಡಿ: ಮದ್ಯ ಮತ್ತು ಮಾದಕ ವ್ಯಸನದ ವಿರುದ್ದ ಕಳೆದ ಎರಡುವರೆ ದಶಕಗಳಿಂದ ಜಾಗೃತಿ ಮತ್ತು ಮನಪರಿವರ್ತನಾ ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಸ್ವಸ್ಥ ಸಮಾಜ ನಿರ್ಮಾಣದ ಆಶಯದೊಂದಿಗೆ ಹುಟ್ಟಿದ ಸಂಸ್ಥೆಯಾಗಿದೆ. ದ.ಕ. ಜಿಲ್ಲೆಯ ಬೆಳ್ತಂಗಡಿಯಲ್ಲಿ ಆರಂಭಗೊಂಡು ಇದೀಗ ರಾಜ್ಯಮಟ್ಟದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನದೇ ಆದ ಜಿಲ್ಲಾ ಶಾಖೆಗಳನ್ನು ಹೊಂದಿದ್ದು ಸಮಾಜದ ಗಣ್ಯರ ಮೇಲ್ವಿಚಾರಣೆಯಲ್ಲಿ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ. ಪ್ರತೀ ವರ್ಷ ಕನಿಷ್ಟ 150 ಮದ್ಯವರ್ಜನ ಶಿಬಿರಗಳನ್ನು ತಲಾ 8 ದಿನಗಳ ಕಾಲ ನಡೆಸಿ ಹತ್ತು ಸಾವಿರಕ್ಕೂ ಮಿಕ್ಕಿದ ವ್ಯಸನಿಗಳಿಗೆ ಚಟದಿಂದ ಮುಕ್ತಿಹೊಂದಲು ಪ್ರೇರಣೆ, ಚಿಕಿತ್ಸೆ, ಸಲಹೆ ನೀಡುತ್ತಾ ಬಂದಿದ್ದು, ಇದುವರೆಗೆ 1128 ಮದ್ಯವರ್ಜನ ಶಿಬಿರಗಳ ಮೂಲಕ 76,688 ಜನರಿಗೆ ಈ ನಿಟ್ಟಿನಲ್ಲಿ ಮನಪರಿವರ್ತನೆ ಮಾಡಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಶೇ.80ಕ್ಕೂ ಮಿಕ್ಕಿದ ಜನರು ನವಜೀವನವನ್ನು ಪಡೆಯುತ್ತಿರುವುದು ವೇದಿಕೆಯ ಯಶಸ್ವಿಗೆ ಕಾರಣವಾಗಿದೆ. ಅಲ್ಲದೆ ಗ್ರಾಮ ಸಮೀಕ್ಷೆ, ಹಕ್ಕೊತ್ತಾಯ ಮಂಡನೆ, ಧಾರ್ಮಿಕ ಕಾರ್ಯಕ್ರಮಗಳು, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಗ್ರಾಮ ಸ್ವಾಸ್ಥ್ಯ ಕಾರ್ಯಕ್ರಮ, ಜಾಗೃತಿ ಸಮಾವೇಶಗಳು, ಮಾದಕ ವಸ್ತು ವಿರೋಧಿ ದಿನಾಚರಣೆಗಳು, ಪಾನಮುಕ್ತರ ಅಭಿನಂದನಾ ಕಾರ್ಯಕ್ರಮಗಳು, ಬೀದಿ ನಾಟಕ, ಕಿರುಚಿತ್ರಗಳ ಪ್ರದರ್ಶನ, ಜನಪ್ರತಿನಿಧಿಗಳೊಂದಿಗೆ ಸಭೆ… ಹೀಗೆ ವಿಶೇಷ ವಿಭಿನ್ನ ಕಾರ್ಯಕ್ರಮಗಳ ಮೂಲಕ ಎಲ್ಲಾ ವರ್ಗದ ಜನರನ್ನು ವ್ಯಸನದಿಂದ ಮುಕ್ತಿಹೊಂದಲು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ. ಈ ಎಲ್ಲದರ ಪರಿಣಾಮವಾಗಿ ಪರೋಕ್ಷವಾಗಿ ಸ್ವಪ್ರೇರಣೆಯಿಂದ ಜನರು ದುಶ್ಚಟ ದುರಾಭ್ಯಾಸವನ್ನು ಬಿಟ್ಟು ನೆಮ್ಮದಿಯಿಂದ ಬದುಕುವಂತಾಗಿದೆ. ಮಹಿಳೆಯರಿಗೆ ಮಹಿಳಾ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರಸ್ತುತ ಮದ್ಯವರ್ಜನ ಶಿಬಿರಗಳಿಗೆ ಮಹಿಳೆಯರೇ ಸ್ವಯಂ ಸೇವಕರಾಗಿ ಮುಂದೆ ಬಂದು ವ್ಯಸನಿಗಳನ್ನು ಶಿಬಿರಕ್ಕೆ ಸೇರಿಸುತ್ತಿದ್ದಾರೆ. ವೇದಿಕೆಯ ಕಾರ್ಯಚಟುವಟಿಕೆಗಳನ್ನು ಗಮನಿಸಿದ ರಾಜ್ಯ ಸರಕಾರ, ಜಿಲ್ಲಾಡಳಿತ, ಪೋಲಿಸ್ ಇಲಾಖೆ, ಸಂಯಮ ಮಂಡಳಿಯವರು ವೇದಿಕೆಯೊಂದಿಗೆ ಸಮಾಲೋಚನೆ ನಡೆಸಿ ಜಂಟಿ ಕಾರ್ಯಕ್ರಮವನ್ನು ನಡೆಸುವ ಮುಖೇನ ಸಹಕರಿಸುತ್ತಿದ್ದಾರೆ.
ಮಹಾತ್ಮಾ ಗಾಂಧೀಜಿಯವರ 18 ರಚನಾತ್ಮಕ ಅಂಶಗಳಲ್ಲಿ ಪಾನನಿಷೇಧವೂ ಒಂದಾಗಿದೆ. ಗಾಂಧಿ ಕಂಡ ಮದ್ಯಮುಕ್ತ ಭಾರತದ ಕನಸನ್ನು ಜನರಿಗೆ ನೆನಪು ಮಾಡಿಕೊಡುವ ಉದ್ದೇಶದಿಂದ ಅಕ್ಟೋಬರ್ 2 ಗಾಂಧಿಜಯಂತಿಯಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ರಾಜ್ಯಾಧ್ಯಂತ ಸಮಾವೇಶಗಳನ್ನು ಏರ್ಪಡಿಸುತ್ತಿದೆ. ಇದೇ ಸಂಧರ್ಭ ಮದ್ಯಪಾನದ ದುರಂತಗಳ ಕುರಿತು ಅರಿವು ಮೂಡಿಸುವಿಕೆ, ಮದ್ಯಮುಕ್ತರಿಗೆ ಅಭಿನಂದನೆ, ಸಮಾಜದ ಗಣ್ಯರನ್ನು ಈ ಚಳುವಳಿಯತ್ತ ಗಮನ ಸೆಳೆಯುವುದಾಗಿದೆ.
ಈ ಬಾರಿಯ ಅಕ್ಟೋಬರ್ 2ರ ಗಾಂಧಿಜಯಂತಿ ಕಾರ್ಯಕ್ರಮದನ್ವಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಸರಕಾರ ಮತ್ತು ಎಲ್ಲಾ ರಾಜಕೀಯ ಪಕ್ಷದ ಮುಖಂಡರಲ್ಲಿ ಆಗ್ರಹಿಸುವುದೇನೆಂದರೆ, ರಾಜ್ಯದಲ್ಲಿ ಹತ್ತುಸಾವಿರಕ್ಕೂ ಮಿಕ್ಕಿದ ಮದ್ಯದಂಗಡಿಗಳಿವೆ. ಇದರಿಂದಾಗಿ ಸರಕಾರದ ಮತ್ತು ಜನಪರ ಕಾಳಜಿಯೊಂದಿಗೆ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳ ಅಭಿವೃದ್ಧಿಯ ಕನಸು ನುಚ್ಚುನೂರಾಗಿದೆ. ಮದ್ಯವ್ಯಸನಿಗಳ ಸಂಖ್ಯೆಯು ಹೆಚ್ಚಾಗುತ್ತಿದ್ದು, ಯುವ ಸಮುದಾಯ ಸಹಿತ ಮದ್ಯ ಮತ್ತು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿದೆ. ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎನ್ನುವ ನೆಪವನ್ನಿಟ್ಟುಕೊಂಡು ರಾಜ್ಯದಲ್ಲಿ ಮದ್ಯಮಾರಾಟ ನಡೆಯುತ್ತಿದ್ದರೆ ರಾಜ್ಯದ ಪರಿಸ್ಥಿತಿ ದಿಕ್ಕಾಪಾಲಾಗುವುದರಲ್ಲಿ ಸಂಶಯವಿಲ್ಲ. ಆದುದರಿಂದ ಸರಕಾರ ಎಚ್ಚೆತ್ತುಕೊಂಡು ಮದ್ಯದ ತೆರಿಗೆಯಿಂದ ಬರುವ ಲಾಭಕ್ಕಿಂತಲೂ ಸಮಾಜದಲ್ಲಿ ಆಗುವ ನಷ್ಟವನ್ನು ಮನದಲ್ಲಿಟ್ಟುಕೊಂಡು ರಾಜ್ಯಾಧ್ಯಂತ ಪಾನನಿಷೇಧ ಜಾರಿಗೊಳಿಸಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಎಲ್ಲಾ ಪಕ್ಷದ ಪ್ರನಾಳಿಕೆಯಲ್ಲಿ ಪಾನನಿಷೇಧದ ಘೋಷಣೆ ಮಾಡಬೇಕು. ಮತ್ತು ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಬೇಕು ಎಂಬುದು ವೇದಿಕೆಯ ಆಗ್ರಹವಾಗಿದೆ. ರಾಜ್ಯದಲ್ಲಿ ಪಾನ ನಿಷೇಧಕ್ಕೆ ಪ್ರಯತ್ನಿಸುವ ಪಕ್ಷಕ್ಕೆ ವೇದಿಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದೆ.
ಈ ಬಾರಿ ಅಕ್ಟೋಬರ್ 2ರ ಗಾಂಧಿಜಯಂತಿಯನ್ನು ರಾಜ್ಯಾಧ್ಯಂತ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರಾಜ್ಯದ 74 ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಜನಜಾಗೃತಿ ಜಾಥಾ, ವ್ಯಸನಮುಕ್ತರಿಗೆ ಸನ್ಮಾನ, ಹಕ್ಕೊತ್ತಾಯ ಕಾರ್ಯಕ್ರಮ ಮತ್ತು ಸಮಾವೇಶಗಳನ್ನು ಏರ್ಪಡಿಸಿ ಸುಮಾರು ಹತ್ತುಲಕ್ಷ ಜನರಿಗೆ ದುಶ್ಚಟಗಳ ವಿರುದ್ದ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಈ ಕಾರ್ಯಕ್ರಮಗಳನ್ನು ಜಿಲ್ಲಾ ವೇದಿಕೆಯ ಮೂಲಕ ಹಮ್ಮಿಕೊಳ್ಳಲಾಗುವುದು. ಅಕ್ಟೋಬರ್ 2 ರಿಂದ 7ರೊಳಗೆ ಈ ಕಾರ್ಯಕ್ರಮವನ್ನು ಅಭಿಯಾನವನ್ನಾಗಿ ಆಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಸತೀಶ್ ಹೊನ್ನವಳ್ಳಿ, ಸಂಚಾಲಕರಾದ ಡಾ|ಎಲ್.ಎಚ್.ಮಂಜುನಾಥ್, ಕಾರ್ಯದರ್ಶಿ ಶ್ರೀ ವಿವೇಕ್ ವಿ.ಪಾೈಸ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷರು ಮತ್ತು ಮಾರ್ಗದರ್ಶಕರೂ ಆಗಿರುತ್ತಾರೆ. ರಾಜ್ಯಾಧ್ಯಂತ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ‘ಆಡಿಯೋ ರೆಕಾರ್ಡಿಂಗ್’ ಮೂಲಕ ಸಂದೇಶವನ್ನು ಕಳುಹಿಸಿದ್ದು, ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಗಾಂಧಿಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ಜನಜಾಗೃತಿ ಸಮಾವೇಶ ಮತ್ತು ನವಜೀವನ ಸಮಿತಿ ಸದಸ್ಯರುಗಳ ಅಭಿನಂದನಾ ಸಮಾರಂಭವು ಪುರಭವನದಲ್ಲಿ ದಿನಾಂಕ 03.10.2017ನೇ ಮಂಗಳವಾರದಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದಾರೆ. ಶ್ರೀ ಗುರುದೇವದತ್ತ ಸಂಸ್ಥಾನ ಶ್ರೀ ಕ್ಷೇತ್ರ ಒಡಿಯೂರು ಪೂಜ್ಯರಾದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ಮಾಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಶಾಸಕರಾದ ಮಾನ್ಯ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ, ಪುತ್ತೂರು ನಗರ ಸಭಾ ಅಧ್ಯಕ್ಷರಾದ ಶ್ರೀಮತಿ ಜಯಂತಿ ಬಲ್ನಾಡು, ಪುತ್ತೂರು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಭವಾನಿ ಚಿದಾನಂದ, ಮದ್ಯಪಾನ ಸಂಯಮ ಮಂಡಳಿ ಸದಸ್ಯರಾದ ಶ್ರೀ ಭಾಸ್ಕರ್ ಕೋಡಿಂಬಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೌಶಲ್ ಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎಂದು ತಾಲೂಕು ಜನಜಾಗೃತಿ ಅಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿ, ಪ್ರಾದೇಶಿಕ ನಿರ್ದೇಶಕರಾದ ಶ್ರೀ ಕೆ.ಮಹಾವೀರ ಅಜ್ರಿ, ನಿರ್ದೇಶಕರಾದ ಶ್ರೀ ಸೀತಾರಾಮ ಶೆಟ್ಟಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕರಾದ ಶ್ರೀ ವಿವೇಕ್ ವಿ.ಪಾೈಸ್, ಯೋಜನಾಧಿಕಾರಿ ಶ್ರೀ ಧರ್ಣಪ್ಪ ಮೂಲ್ಯ, ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಶ್ರೀ ರಾಮಣ್ಣ ಗೌಡ, ವಲಯಾಧ್ಯಕ್ಷರಾದ ಶ್ರೀ ಪ್ರಶಾಂತ್ ಉಪಸ್ಥಿತರಿರುವರು.
ಬೆಳಗ್ಗೆ 9.00 ರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರಿನಿಂದ ಜನಜಾಗೃತಿ ಜಾಥಾ ನಡೆಯಲಿದೆ. ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.