ಕಾಸರಗೋಡು/ಮಂಜೇಶ್ವರ ಜನಜಾಗೃತಿ ವೇದಿಕೆಯ 2024-25 ನೇ ಸಾಲಿನ ಪ್ರಥಮ ಸಭೆಯನ್ನು ಕಾಸರಗೋಡಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿ ವೇದಿಕೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ಮಾಡಿದರು. ಈ ಸಭೆಯ ಅಧ್ಯಕ್ಷತೆಯನ್ನು ಮಂಜೇಶ್ವರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿಯವರು ವಹಿಸಿದ್ದು, ದ.ಕ.2 ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರವೀಣ್ ಕುಮಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಾಸರಗೋಡು/ಮಂಜೇಶ್ವರ ಜನಜಾಗೃತಿ ವೇದಿಕೆಯ ಚಟುವಟಿಕೆಗಳನ್ನು, ಕಾಸರಗೋಡು/ಮಂಜೇಶ್ವರ ನವಜೀವನ ಸಮಿತಿ ಸದಸ್ಯರ ಸಹಕಾರಗಳನ್ನು ಶ್ಲಾಘಿಸಿದರು. 2023-24 ನೇ ಸಾಲಿನ ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನದ ವರದಿಯನ್ನು ಕಾಸರಗೋಡು ತಾಲೂಕು ಯೋಜನಾಧಿಕಾರಿ ಮುಖೇಶ್ ರವರು ಮಂಡಿಸಿದರು. ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಯವರಾದ ಶ್ರೀ ಗಣೇಶ್ ಆಚಾರ್ಯರವರು 2024-25 ನೇ ಸಾಲಿನ ಜನಜಾಗೃತಿ ಕಾರ್ಯಕ್ರಮಗಳ ಕ್ರಿಯಾಯೋಜನೆಯ ವಿವರವನ್ನು ಮಂಡಿಸುತ್ತಾ, ಎಲ್ಲರ ಅಭಿಪ್ರಾಯದಂತೆ ತಾಲೂಕುವಾರು/ವಲಯವಾರು ಕ್ರಿಯಾಯೋಜನೆಯನ್ನು ವಿಂಗಡಿಸಲಾಯಿತು. ಈ ಸಭೆಯಲ್ಲಿ ವಿಶೇಷವಾಗಿ ಏಪ್ರಿಲ್ 26 ನೇ ತಾರೀಖಿನಂದು ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಮದ್ಯಮುಕ್ತ ಚುನಾವಣೆಯನ್ನಾಗಿ ಮಾಡುವ ಜಾಗೃತಿ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ನಂತರ ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆ ರಚನೆಯ ಪ್ರಕ್ರಿಯೆಯು ನಡೆದಿದ್ದು, ಅಧ್ಯಕ್ಷರಾಗಿ ಬದಿಯಡ್ಕ ವಲಯದ ಅಧ್ಯಕ್ಷರಾಗಿರುವ ಶ್ರೀ ಅಖಿಲೇಶ್ ನಗುಮುಗಂರವರು, ಉಪಾಧ್ಯಕ್ಷರಾಗಿ ಎಡನೀರು ವಲಯದ ಅಧ್ಯಕ್ಷರಾಗಿರುವ ಶ್ರೀ ವಾಮನಾಚಾರ್ಯರವರು, ಕೋಶಾಧಿಕಾರಿಯಾಗಿ ಎಡನೀರು ವಲಯದ ಸದಸ್ಯರಾಗಿರುವ ಶ್ರೀ ಶರೀಫ್ ಕೊಡವಂಜಿಯವರು ಎಲ್ಲರ ಒಪ್ಪಿಗೆಯಂತೆ ಆಯ್ಕೆಯಾದರು. ಈ ಸಭೆಯಲ್ಲಿ ಜನಜಾಗೃತಿ ವೇದಿಕೆಯ ನಿಕತಪೂರ್ವ ಅಧ್ಯಕ್ಷರಾದ ಶ್ರೀ ಅಶ್ವತ್ ಪೂಜಾರಿ ಲಾಲ್ ಬಾಗ್ ರವರು ಉಪಸ್ಥಿತರಿದ್ದು, ಮಂಜೇಶ್ವರ ತಾಲೂಕು ಯೋಜನಾಧಿಕಾರಿಯವರಾದ ಶ್ರೀಮತಿ ಶಶಿಕಲಾ ಸುವರ್ಣರವರು ಧನ್ಯವಾದ ನೀಡಿದರು. ಸಭೆಯಲ್ಲಿ ಕಾಸರಗೋಡು/ಮಂಜೇಶ್ವರ ತಾಲೂಕುಗಳ ಎಲ್ಲಾ ವಲಯಗಳ ಜನಜಾಗೃತಿ ವೇದಿಕೆ ಪದಾಧಿಕಾರಿಗಳು, ಕೇಂದ್ರ ಒಕ್ಕೂಟದ ಅಧ್ಯಕ್ಷರುಗಳಾದ ಮಂಜೇಶ್ವರ ತಾಲೂಕಿನ ಶ್ರೀ ಉದಯ್ ಕುಮಾರ್ ರವರು ಹಾಗೂ ಕಾಸರಗೋಡು ತಾಲೂಕಿನ ಜ್ಞಾನೇಶ್ ಆಚಾರ್ಯರವರು, ಒಕ್ಕೂಟಗಳ ವಲಯಧ್ಯಕ್ಷರುಗಳು, ವಲಯದ ಮೇಲ್ವಿಚಾರಕರು, ನವಜೀವನ ಸಮಿತಿಯ ಅಧ್ಯಕ್ಷರುಗಳು, ನವಜೀವನ ಸಮಿತಿಯ ಪೋಷಕರು ಈ ಸಭೆಯಲ್ಲಿ ಉಪಸ್ಥಿತರಿದ್ದು ಸಭೆಯ ಯಶಸ್ವಿಗೆ ಕಾರಣರಾದರು.
