‘ಮನುಷ್ಯನಿಗೆ ಬರುವ ಒಳ್ಳೆಯ ಕ್ಷಣಗಳು ಕೆಟ್ಟ ಕ್ಷಣಗಳು ಅವರವರ ಭವಿಷ್ಯದ ಮೇಲೆ ವಿಶೇಷವಾದ ಪರಿಣಾಮವನ್ನು ಬೀರುತ್ತದೆ ಒಳ್ಳೆಯ ಕ್ಷಣಗಳಿಂದ ಬದುಕು ಕಟ್ಟಿಕೊಂಡರೆ ಕೆಟ್ಟ ಕ್ಷಣಗಳಿಂದ ಮತಿಭ್ರಮಣೆ ಯಾಗಿ ದಿಕ್ಕು ದೆಸೆ ಇಲ್ಲದೆ ಕಂಗಾಲಾಗಿ ಬದುಕು ನಾಶವಾಗುತ್ತದೆ. ಪರಿವರ್ತನೆ ಲೋಕದ ಉಪಕಾರಕ್ಕೆ ಅಲ್ಲ. ನಾವು ಬದಲಾದಾಗ ಸಮಾಜ ನಮ್ಮನ್ನು ನೋಡುತ್ತಿದೆಯೇ ವಿನಃ ಪ್ರಮಾಣ ಪತ್ರ ಅಥವಾ ಹೆಗ್ಗಳಿಕೆ ವ್ಯಕ್ತಪಡಿಸುವುದಿಲ್ಲ. ಪ್ರಾಣಿ ಪಕ್ಷಿಗಳು ಬದುಕುವ ವಿಚಾರದಲ್ಲಿ ನಿರ್ಧಾರ ಬದಲಾಯಿಸುವುದಿಲ್ಲ. ವ್ಯಸನದಿಂದ ರಕ್ತಪಾತ, ಪ್ರಾಣಹಾನಿ, ಅಪಘಾತ, ಸೋಲು, ಸ್ವಾಭಾವಿಕ. ಜಾತಿ ಮತ ಸಂಪ್ರದಾಯಗಳನ್ನು ಮೀರಿದ್ದೇ ಈ ವ್ಯಸನ. ಹಣ ಖರ್ಚು ಮಾಡಿ ಸೋಲು ಖರೀದಿಸುವುದೇ ಇದರ ಉದ್ದೇಶ. ಆದುದರಿಂದ ಯಾವುದೇ ವ್ಯಸನಿಗಳು ಆತ್ಮಸಾಕ್ಷಿಗೆ ಸರಿಯಾಗಿ ಚಟ ಮುಕ್ತರಾಗಬೇಕು” ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ। ಡಿ. ವೀರೇಂದ್ರ ಹೆಗ್ಗಡೆಯವರು ಮಾಹಿತಿ ನೀಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ಉಜಿರೆಯ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಸಲ್ಪಟ್ಟ 131 ನೇ ವಿಶೇಷ ಮದ್ಯವರ್ಜನ ಶಿಬಿರದ 62 ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಿಬಿರದಲ್ಲಿ ರಾಜ್ಯದ ವಿವಿಧೆಡೆಯಿಂದ ಶಿಬಿರಾರ್ಥಿಗಳು ಆಗಮಿಸಿದ್ದು ಅತಿ ಹೆಚ್ಚು ಬೆಂಗಳೂರಿನವರಾಗಿದ್ದು, ಈ ಶಿಬಿರದಲ್ಲಿ ಎಂಜಿನಿಯರ್ಗಳು 4 ಜಮೀನ್ದಾರರು 10 ಸ್ವ ಉದ್ಯೋಗಿಗಳು10 ಸರ್ಕಾರಿ ನೌಕರರು6 ಮಂದಿ ಹಾಗೂ ಇನ್ನಿತರ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡವರು ಭಾಗವಹಿಸಿದ್ದರು. ವೇದಿಕೆಯ ಮೂಲಕ 1328 ಸಮುದಾಯ ಮದ್ಯವರ್ಜನ ಶಿಬಿರಗಳು ರಾಜ್ಯಾದ್ಯಂತ ನಡೆಯುತ್ತಿದ್ದು,ಬಹುತೇಕ 1.05ಲಕ್ಷ ಜನರಿಗೆ ವ್ಯಸನ ಮುಕ್ತರಾಗಿ ಬಾಳ್ವೆ ನಡೆಸಲು ಸಹಕಾರಿಯಾಗಿದೆ.ಮುಂದಿನ ಆರ್ಥಿಕ ವರ್ಷದಲ್ಲಿ 161 ಶಿಬಿರಗಳನ್ನು ರಾಜ್ಯಾದ್ಯಂತ ನಡೆಸಲಾಗುವುದೆಂದು ವೇದಿಕೆಯ ನಿರ್ದೇಶಕರಾದ ಶ್ರೀ ವಿವೇಕ್ ವಿ ಪಾಯಸ್ ತಿಳಿಸಿದರು.ಯೋಜನಾಧಿಕಾರಿಗಳಾದ ಶ್ರೀ ತಿಮ್ಮಯ್ಯ ನಾಯ್ಕ ಶ್ರೀ ಗಣೇಶ್ ಆಚಾರ್ಯ ಶ್ರೀ ಭಾಸ್ಕರ್ ಎನ್ ಹಾಗೂ ವೇದಿಕೆಯ ಶಿಬಿರಾಧಿಕಾರಿಗಳು ಮತ್ತು ಆರೋಗ್ಯ ಸಹಾಯಕರು ಉಪಸ್ಥಿತರಿದ್ದರು.
ಮುಂದಿನ ವಿಶೇಷ ಶಿಬಿರವು ದಿನಾಂಕ 18.3.2019ರಂದು ನಡೆಯಲಿದೆ ಎಂದು ತಿಳಿಸಿದರು.
|
|