ಹೊಳಲ್ಕೆರೆ ತಾಲೂಕಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಸ್ಮೃತಿ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ

Janajagurthi Vedike News

ಹೊಳಲ್ಕೆರೆ ಅಕ್ಟೋಬರ್ 4 : ಆರ್ಥಿಕವಾಗಿ ಹಿಂದುಳಿದ ಜನರ ಹಾಗೂ ಮಹಿಳೆಯರ ಆರ್ಥಿಕವಾಗಿ ಸ್ವಾವಲಂಬನೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪೂರಕವಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಹೊಳಲ್ಕೆರೆ ಶಾಸಕರಾದ ಎಂ.ಚಂದ್ರಪ್ಪ ಅವರು ಹೇಳಿದರು.ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಸ್ಮೃತಿ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳ ಸಂಸ್ಥೆಯು ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದ ಹಾಗೂ ಮಹಿಳೆಯರ ಆರ್ಥಿಕ ಪ್ರಗತಿಯ ಜೊತೆಗೆ ಸ್ವ ಉದ್ಯೋಗ ಹೊಂದಲು ರುಡ್‌ಸೆಟ್ ಮೂಲಕ ತರಬೇತಿಗಳನ್ನು ಹಮ್ಮಿಕೊಂಡು ನಿರುದ್ಯೋಗ ಯುವಕರಿಗೆ ದಾರಿ ದೀಪವಾಗುತ್ತಿದೆ. ದುಶ್ಚಟಗಳಿಗೆ ಸಂಸಾರವನ್ನು ಹಾಳು ಮಾಡಿಕೊಂಡು, ಜೀವನದ ಮೌಲ್ಯವನ್ನು ಕಳೆದುಕೊಂಡವರನ್ನು ಗುರುತಿಸಿ ಅಂತವರಿಗೆ 8 ದಿನಗಳ ಕಾಲ ಶಿಬಿರ ಮಾಡಿ, ಅವರಿಗೆ ನವ ಜೀವನ ಕಟ್ಟಿಕೊಳ್ಳಲು ಸಹಕಾರ ನೀಡುತ್ತಿರುವುದು ಶ್ಲಾಘನೀಯ ಸಮಾಜೋಮುಖಿ ಕಾರ್ಯಗಳನ್ನು ಧರ್ಮಸ್ಥಳ ಸಂಸ್ಥೆಯು ಮಾಡುತ್ತಿದ್ದು, ಅನ್ನದಾನ, ವಿದ್ಯಾದಾನಗಳ ಮೂಲಕ ಜನಮನ್ನಣೆ ಪಡೆದುಕೊಂಡಿದೆ ಎಂದರು. ಧರ್ಮಸ್ಥಳ ಸಂಸ್ಥೆಯ ಕಚೇರಿಯು ಬಾಡಿಗೆ ಕಟ್ಟಡದಲ್ಲಿದ್ದು, ಸ್ವಂತ ಕಟ್ಟಡಹೊಂದಲು ಜಾಗದ ವ್ಯವಸ್ಥೆ ಹೊಳಲ್ಕೆರೆಯಲ್ಲಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಹೊಳಲ್ಕೆರೆ ತಾಲ್ಲೂಕಿನ ಎಲ್ಲ ಕೆರೆಗಳಿಗೆ ಶೀಘ್ರದಲ್ಲಿ ನೀರು ತುಂಬಿಸುವ ಕಾರ್ಯ ಮಾಡಲಾಗುವುದು ಎಂದು ಶಾಸಕರಾದ ಚಂದ್ರಪ್ಪ ಹೇಳಿದರು. ಹೊಳಲ್ಕೆರೆ ಮಾಜಿ ಶಾಸಕರಾದ ಪಿ.ರಮೇಶ್ ಮಾತನಾಡಿ ಆರ್ಥಿಕವಾಗಿ ವ್ಯವಹಾರವು ಕೇವಲ ಪುರುಷರ ಉಪಸ್ಥಿತಿಯಲ್ಲಿ ನಡೆಯುವಂತಹದ್ದನ್ನು ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿ ಗಂಡಿನಷ್ಟೆ ಜೀವನ ಸಾಗಿಸಲು ಬೇಕಾದ ವ್ಯವಹಾರ ಜ್ಞಾನವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಜನರ ಏಳಿಗೆಗೆ ಸಂಸ್ಥೆಯು ಪೂರಕವಾಗಿದೆ. ಕುಡಿತದ ಚಟಕ್ಕೆ ಬಲಿಯಾದವರನ್ನು ಗುರುತಿಸಿ ಅವರಿಗೆ ಪುನರ್ಜನ್ಮ ನೀಡುತ್ತಿರುವುದು ಯಾವ ಸಂಘ ಸಂಸ್ಥೆಗಳು ಮಾಡದ ಕಾರ್ಯವನ್ನು ಧರ್ಮಸ್ಥಳ ಸಂಸ್ಥೆಯು ಮಾಡುತ್ತಿದೆ ಎಂದು ಅಭಿವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ನಿರ್ದೇಶಕರಾದ ದಿನೇಶ್ ಪೂಜಾರಿ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ, ಜನಜಾಗೃತಿ ವೇದಿಕೆಯ ಹಿನ್ನಲೆ ಬಗ್ಗೆ, ಜಿಲ್ಲೆಯ ಪ್ರಗತಿ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಮಾರುತೇಶ್, ವೃತ್ತ ನಿರೀಕ್ಷಕರಾದ ರವೀಶ್ ಕೆ.ಎನ್, ತಾ.ಪಂ ಸದಸ್ಯರಾದ ಗಿರಿಜಮ್ಮಾ ಅಜ್ಜಯ್ಯ, ಗ್ರಾ.ಪಂ ಅಧ್ಯಕ್ಷರಾದ ರಾಜಪ್ಪ, ತಾ.ಪಂ ಮಾಜಿ ಅಧ್ಯಕ್ಷರಾದ ಮೋಹನ್ ನಾಗರಾಜ್, ಯೋಜನಾಧಿಕಾರಿಗಳಾದ ಪ್ರಭಾಕರ್ ಹಾಗೂ ಯೋಜನಾಧಿಕಾರಿಗಳು ಪ್ರಾದೇಶಿಕ ಕಚೇರಿ ಧಾರಾವಾಡ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕು ಮುನ್ನ ಶಿವಪುರ ಗ್ರಾಮದಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ ಜಾಥಕ್ಕೆ ಮಾಜಿ ಶಾಸಕರಾದ ರಮೇಶ್ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ದುಶ್ಚಟಗಳ ವಿರುದ್ಧ ಘೋಷವಾಕ್ಯಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸಲಾಯಿತು.