ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳು ಶ್ಲಾಘನೀಯ – ಶ್ರೀ ಶ್ರೀ ಕಾರದ ವೀರ ಬಸವ ಮಹಾಸ್ವಾಮಿಗಳು

Janajagurthi Vedike News

ಗುಬ್ಬಿ : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತುಮಕೂರು ಜಿಲ್ಲೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುಬ್ಬಿ ತಾಲೂಕು ವತಿಯಿಂದ ಹಮ್ಮಿಕೊಂಡ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ನವಜೀವನ ಸವ ಕಾರ್ಯಕ್ರಮ ಶ್ರವಣ ಪಾಟೀಲ್ ಕಲ್ಯಾಣ ಮಂಟಪ ಚೇಳೂರಿನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಹಾಗೂ ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಶ್ರೀ ಕಾರದ ವೀರ ಬಸವ ಮಹಾಸ್ವಾಮಿಜಿಗಳು ಶ್ರೀ ಶ್ವೇತಕಮಠಪುರಿ ಜಂಗಮ ಸುಕ್ಷೇತ್ರ ಬೆಳ್ಳಾವಿ, ಇವರು ಆಶೀರ್ವಚನ ನೀಡುತ್ತಾ ಧರ್ಮಸ್ಥಳ ಕ್ಷೇತ್ರದಿಂದ ನಡೆಯುವ ಜನಜಾಗೃತಿಯ ಕಾರ್ಯಕ್ರಮ ನಮ್ಮ ಸಮಾಜವನ್ನು ವ್ಯಸನಮುಕ್ತ ಗಳಿಸುವುದರಲ್ಲಿ ಸಂದೇಹವೇ ಇಲ್ಲ, ಈ ಕಾರ್ಯಕ್ಕೆ ಸಮಾಜದ ಎಲ್ಲ ಭಾಂಧವರು ಸಹಕರಿಸಿದರೆ ಗಾಂಧೀಜಿ ಕನಸಿನ ರಾಮರಾಜ್ಯ ನನಸಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಪ್ರೆಸ್ ರಾಜಣ್ಣ ಮಾತನಾಡುತ್ತ, ಮದ್ಯವರ್ಜನ ಶಿಬಿರದಿಂದ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಯನ್ನು ಪರಿವರ್ತಿಸಿ ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಮುಂದಿನ ಡಿಸೆಂಬರ್ ಒಳಗಡೆ ಮದ್ಯವರ್ಜನ ಶಿಬಿರವನ್ನು ಪ್ರಾರಂಭಿಸಲಾಗುವುದು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜನಜಾಗೃತಿ ವೇದಿಕೆ ಬೆಂಗಳೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ರವರು “ಮದ್ಯಪಾನ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ”ದ ಬಗ್ಗೆ ಅಂಕಿ-ಅಂಶಗಳ ಸಮೇತ ಉದಾಹರಣೆಗಳನ್ನು ನೀಡುತ್ತಾ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸುವುದರ ಮೂಲಕ ಗಾಂಧಿ ಸ್ಮರಣೆ ಮಾಡಲಾಯಿತು. ಇದುವರೆಗೆ ನಡೆದ ಮಧ್ಯವರ್ಜನ ಶಿಬಿರ ಗಳಿಗೆ ಸೇರಿ ಪಾನಮುಕ್ತ ನವಜೀವನ ಸದಸ್ಯರಿಗೆ ಶಾಲು ಹಾಗೂ ಪುಷ್ಪವನ್ನ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭ ಪಾನಮುಕ್ತ ಸದಸ್ಯರು ಅನುಭವ ಹಂಚಿಕೊಂಡರು. ಪೂಜ್ಯರ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರ ಸಂದೇಶವನ್ನು ತಿಳಿಸಲಾಯಿತು. ತಾಲೂಕು ಯೋಜನಾಧಿಕಾರಿ ಶ್ರೀ ಹರೀಶ್ ಅವರು ಸ್ವಾಗತಿಸಿ, ಚೇಳೂರು ವಲಯದ ಮೇಲ್ವಿಚಾರಕರು ಧನ್ಯವಾದವಿತ್ತರು, ಮೇಲ್ವಿಚಾರಕರು ವಿಶ್ವನಾಥ ಹಾಗೂ ಶ್ರೀಮತಿ ಪ್ರೇಮಾ ರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಯತೀಶ್, ಜನಜಾಗೃತಿ ಜಿಲ್ಲಾ ಸದಸ್ಯರು ಮಹಾವೀರ ಜೈನ್, ಬಸವರಾಜ್, ನವಜೀವನ ಸಮಿತಿ ಸದಸ್ಯರು, ನವಜೀವನ ಪೋಷಕರು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.